
ಕವಿತಾಳ: ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ಕೃಷಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ದೊಡ್ಡ ರೈತರಿಗೆ ರಾತ್ರೋರಾತ್ರಿ ಬಿತ್ತನೆ ಬೀಜ ವಿತರಿಸುವ ಅಧಿಕಾರಿಗಳು ಸಣ್ಣ ರೈತರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸಮೀಪದ ಪಾಮನಕಲ್ಲೂರು ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಶೇಂಗಾ ಬಿತ್ತನೆ ಬೀಜ ಖರೀದಿಗೆ ಆಗಮಿಸಿದ್ದ ರೈತರು ಮಧ್ಯಾಹ್ನ 1ಗಂಟೆಯಾದರೂ ಕೇಂದ್ರದ ಬಾಗಿಲು ತೆಗೆಯದ ಕಾರಣ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಾಮನಕಲ್ಲೂರು, ಕೊಟೇಕಲ್, ಅಮೀನಗಡ, ಹರ್ವಾಪುರ, ಬೆಂಚಮರಡಿ, ತುಪ್ಪದೂರು, ಆನಂದಗಲ್, ಯತಗಲ್ ಮತ್ತು ಗುಡಿಹಾಳ ಗ್ರಾಮಗಳಿಂದ ರೈತರು ಆಗಮಿಸಿದ್ದರು.
‘ಸೋಮವಾರ ಸಂಜೆವರೆಗೆ ಕಾದು ಕುಳಿತರೂ ಬಿತ್ತನೆ ಬೀಜ ವಿತರಣೆ ಮಾಡಲಿಲ್ಲ. ರಾತ್ರಿ 8 ಗಂಟೆ ನಂತರ ಕೆಲವು ದೊಡ್ಡ ರೈತರಿಗೆ ಕರೆ ಮಾಡಿದ ಅಧಿಕಾರಿಗಳು ಅವರಿಗೆ ಬೀಜ ವಿತರಿಸಿದ್ದಾರೆ. ಈಗ ಬೆಳಿಗ್ಗೆ 7 ಗಂಟೆಯಿಂದ ಕಾದು ಕುಳಿತಿದ್ದೇವೆ ಮಧ್ಯಾಹ್ನ 1 ಗಂಟೆಯಾದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ. ಹೊಲ ಮನೆ ಕೆಲಸ ಬಿಟ್ಟು ಎರಡು ದಿನಗಳಿಂದ ಶೇಂಗಾ ಬಿತ್ತನೆ ಬೀಜಕ್ಕಾಗಿ ಕಾಯುವಂತಾಗಿದೆ’ ಎಂದು ರೈತರಾದ ಮಲ್ಲಿಕಾರ್ಜುನ, ಸೈಯದ್ ಅಜ್ಮೀರ್, ರಶೀದ್ ಬಂಕದ, ಮಲ್ಲಪ್ಪ, ದಾವಲಸಾಬ್, ಅಮರಣ್ಣ, ಬಸಲಿಂಗಮ್ಮ, ಅನಸೂಯಮ್ಮ, ಯಲ್ಲಮ್ಮ, ಬಸಮ್ಮ, ಮತ್ತಿತರರು ದೂರಿದರು.
‘ಕೃಷಿ ಅಧಿಕಾರಿಗೆ ಮೊಬೈಲ್ ಕರೆ ಮಾಡಿದರೆ ಮೀಟಿಂಗ್‌ನಲ್ಲಿದ್ದೇನೆ ಎಂದು ಕರೆ ಕಡಿತ ಮಾಡಿದರು. ಕೇಂದ್ರದ ಬಾಗಿಲು ತೆರೆಯುತ್ತಿಲ್ಲ. ಕಾದು ಕಾದು ರೈತರು ವಾಪಸ್ ತೆರಳಿದ ನಂತರ ಆಗಮಿಸುವ ಅಧಿಕಾರಿಗಳು ತಮಗೆ ಬೇಕಿದ್ದ ರೈತರಿಗೆ ಕರೆಯಿಸಿಕೊಂಡು ಅವರಿಗೆ ಬೀಜ ವಿತರಣೆ ಮಾಡುತ್ತಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕಾಳಜಿ ವಹಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ರೈತರಾದ ಇಮಾಂಹುಸೇನ್, ಅಂಬಣ್ಣ, ಈರಪ್ಪ, ಶಿವಮ್ಮ, ಬಸಲಿಂಗಮ್ಮ ಎಚ್ಚರಿಸಿದರು.
ಶೇಂಗಾ ಬೀಜ ವಿತರಣೆ ಅವಧಿ ಮುಗಿದು ತಿಂಗಳಾಗಿದೆ ಅರ್ಜಿ ಸಲ್ಲಿಸಿದ ಆಯ್ದ ರೈತರಿಗೆ ಮಾತ್ರ ಈಗ ‘ಡೆಮೊ’ ಬೀಜ ವಿತರಣೆ ಮಾಡಲಾಗುತ್ತಿದೆ ತಪ್ಪು ಮಾಹಿತಿಯಿಂದ ರೈತರು ಜಮಾಯಿಸಿದ್ದಾರೆಗುರುನಾಥ ಸಹಾಯಕ ಕೃಷಿ ನಿರ್ದೇಶಕ ಮಾನ್ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.