ADVERTISEMENT

ಕವಿತಾಳ | ಅಂತರ್ಜಲ ಕುಸಿತ: ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರ

​ಪ್ರಜಾವಾಣಿ ವಾರ್ತೆ
Published 17 ಮೇ 2025, 6:58 IST
Last Updated 17 ಮೇ 2025, 6:58 IST
ಕವಿತಾಳ ಸಮೀಪದ ಯತಗಲ್ ಗ್ರಾಮದಲ್ಲಿ ನೀರಿಗಾಗಿ ಜನರು ಪರದಾಡುತ್ತಿರುವುದು
ಕವಿತಾಳ ಸಮೀಪದ ಯತಗಲ್ ಗ್ರಾಮದಲ್ಲಿ ನೀರಿಗಾಗಿ ಜನರು ಪರದಾಡುತ್ತಿರುವುದು   

ಕವಿತಾಳ: ತುಂಗಭದ್ರ ಎಡದಂಡೆ ಕಾಲುವೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೃಹತ್‌ ಕೆರೆಗಳನ್ನು ನಿರ್ಮಿಸಿದ್ದರೂ ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಮತ್ತು ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.

ಕೆರೆ, ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ, ನೀರು ಪೂರೈಕೆಯಲ್ಲಿ ಸತತ ವ್ಯತ್ಯಯ ಉಂಟಾಗುತ್ತಿದ್ದರೂ ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸದಿರುವುದು ಮತ್ತಿತರ ಕಾರಣಗಳಿಂದ ಬೇಸಿಗೆಯಲ್ಲಿ ಸತತ ನೀರಿನ ಸಮಸ್ಯೆ ಉಂಟಾಗುತ್ತಿದೆ.

ಹಳ್ಳಿಗಳಲ್ಲಿ ಜನ, ಜನುವಾರುಗಳಿಗೆ ಕುಡಿಯಲು, ಬಳಕೆ ನೀರಿಗೆ ಪರದಾಡುವ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮಸ್ಥರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾ ನೀರಿನ ಮೂಲ ಹುಡುಕಿಕೊಂಡು ಜಮೀನುಗಳಿಗೆ ಅಲೆಯುತ್ತಿದ್ದಾರೆ.

ADVERTISEMENT

‘ಅಮೀನಗಡ ಪಂಚಾಯಿತಿ ವ್ಯಾಪ್ತಿಯ ಯತಗಲ್‌ ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಮೂರು ಕೊಳವೆಬಾವಿಗಳಲ್ಲಿ ಎರಡು ಕೊಳವೆಬಾವಿಗಳು ಕೆಟ್ಟಿವೆ ಅವುಗಳ ದುರಸ್ತಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಿಲ್ಲ ಮತ್ತೊಂದು ಕೊಳವೆಬಾವಿಯಲ್ಲಿ ಅಂತರ್ಜಲ ಕುಸಿದು ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದೆ. ಗ್ರಾಮದ ಸುಮಾರು 1,500 ಜನ ಸೇರಿದಂತೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿತ್ತು ಇತ್ತೀಚೆಗೆ ಕೆರೆ ನೀರು ಪೂರೈಕೆಗೆ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಆದರೆ ವಟಗಲ್‌, ಅಮೀನಗಡ ಗ್ರಾಮಗಳಿಂದ ಶುದ್ದ ಕುಡಿಯುವ ನೀರು ತರಬೇಕಿದೆ’ ಎಂದು ಗ್ರಾಮದ ಯಮನೂರು ಮತ್ತು ರಮೇಶ ಹೇಳಿದರು.

ನೀರಿನ ಸಮಸ್ಯೆಯಿಂದ ರೋಸಿಹೋದ ಬೆಂಚಮರಡಿ ಗ್ರಾಮದ ಕೆಲವರು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಕವಿತಾಳ ಸಮೀಪದ ಬೆಂಚಮರಡಿ ಗ್ರಾಮಕ್ಕೆ ನೀರು ಪೂರೈಸಲು ನಿರ್ಮಿಸುತ್ತಿರುವ ಸಂಪ್ ಕಾಮಗಾರಿ ಪ್ರಗತಿಯಲ್ಲಿರುವುದು

‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡಿದರು ಎನ್ನುವಂತೆ ಬೇಸಿಗೆ ಆರಂಭದಲ್ಲಿ ಸುಮ್ಮನೆ ಕುಳಿತ ಅಧಿಕಾರಿಗಳು ಈಚೆಗೆ ಸಂಪ್‌ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅದು ಪೂರ್ಣಗೊಂಡಿಲ್ಲ. ಬೇಸಿಗೆ ಕಾಲ ಮುಗಿಯುತ್ತಿದೆ ಮಳೆ ಆರಂಭವಾಗಿದೆ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾದರೆ ಸಂಪ್‌ ನಿಂದ ನೀರು ಪೂರೈಕೆ ಮಾಡುವುದು ಸಂದೇಹ, ಅಧಿಕಾರಿಗಳ ನಿರ್ಲಕ್ಷದಿಂದಲೇ ನೀರಿನ ಸಮಸ್ಯೆ ಉಲ್ಬಣವಾಗಿದೆ’ ಎಂದು ಬೆಂಚಮರಡಿ ಗ್ರಾಮದ ಹುಚ್ಚಪ್ಪ ನಾಯಕ, ಶರಣಪ್ಪ ಮತ್ತು ಕನಕಪ್ಪ ನಾಯಕ ಆರೋಪಿಸಿದರು.

ಕವಿತಾಳ ಸಮೀಪದ ಅಮೀನಗಡ ಪಾಮನಕಲ್ಲೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ನೀರು ಪೂರೈಸುವ ಇರಕಲ್ ಕೆರೆ
ವಿದ್ಯುತ್‌ ವ್ಯತ್ಯಯದಿಂದ ಯತಗಲ್‌ ಗ್ರಾಮದಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಬೆಂಚಮರಡಿ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಂಪ್‌ ನಿರ್ಮಿಸಲಾಗುತ್ತಿದೆ ಕಾಮಾಗರಿ ಶೀಘ್ರ ಪೂರ್ಣಗೊಳಿಸಿ ನೀರು ಪೂರೈಸಲಾಗುವುದು
ಅಮರೇಶ ಯಾದವ ಮಸ್ಕಿ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.