
ಕವಿತಾಳ: ಸಮೀಪದ ಹಾಲಾಪುರ ಗ್ರಾಮದ ನಾಡ ಕಚೇರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದ ಕಾರಣ ಸಾರ್ವಜನಿಕರು ಅಲೆಯುವಂತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಳಿಗ್ಗೆ 11 ಗಂಟೆಯಾದರೂ ಕಂಪ್ಯೂಟರ್ ಆಪರೇಟರ್ ಹೊರತುಪಡಿಸಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬಾರದ ಕಾರಣ ಮಂಗಳವಾರ ಕಚೇರಿಗೆ ಬಂದ ಕೆಲವರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
‘ಮಲ್ಲದಗುಡ್ಡ, ಹಿರೇದಿನ್ನಿ, ಮಲ್ಕಾಪುರ ಮತ್ತು ತೋರಣದಿನ್ನಿ ಸೇರಿದಂತೆ ಅಂದಾಜು 30 ಹಳ್ಳಿಗಳು ಮತ್ತು ಕ್ಯಾಂಪ್‌ಗಳು ಈ ಕಚೇರಿ ವ್ಯಾಪ್ತಿಗೆ ಒಳಪಟ್ಟಿದ್ದು, ಮಾಸಾಶನದ ಅರ್ಜಿ ಹಾಕಲು ವೃದ್ದರು, ಜಾತಿ–ಆದಾಯ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು, ಪಹಣಿ ಪಡೆಯಲು ರೈತರು, ಅಂಗವಿಕಲರು ಹಾಗೂ ಮತ್ತಿತರರು ವಿವಿಧ ಕೆಲಸಗಳಿಗೆ ಕಚೇರಿಗೆ ಬರುತ್ತಾರೆ. ಆದರೆ, ಅಧಿಕಾರಿಗಳಿಗಾಗಿ ಮಧ್ಯಾಹ್ನದವರೆಗೆ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ’ ಎಂದು ಈರನಗೌಡ ದಳಪತಿ ಆರೋಪಿಸಿದರು.
‘ಐವರು ಗ್ರಾಮ ಆಡಳಿತಾಧಿಕಾರಿಗಳು, ಒಬ್ಬ ಕಂದಾಯ ನಿರೀಕ್ಷಕ ಮತ್ತು ಒಬ್ಬ ಕೇಸ್ ವರ್ಕರ್ ನಿತ್ಯ ಕಚೇರಿಗೆ ತಡವಾಗಿ ಬರುತ್ತಾರೆ. ಮೂರು ತಿಂಗಳಿಂದ ಗಮನಿಸುತ್ತಿದ್ದೇವೆ. ಬೆಳಿಗ್ಗೆ ಕೆಲಸ ಬಿಟ್ಟು ಕಚೇರಿಗೆ ಬರುವ ಸಾರ್ವಜನಿಕರು ಕಾದು ಬೇಸತ್ತು ವಾಪಸ್ ಆಗುತ್ತಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ದೇಸಾಯಿ ದೂರಿದರು.
‘ಬೆಳಿಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇವೆ. 12 ಗಂಟೆಯಾದರೂ ಅಧಿಕಾರಿಗಳು ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಮಸ್ಕಿಗೆ ಬರುವಂತೆ ಹೇಳುತ್ತಾರೆ. ತುರ್ತು ಕೆಲಸಗಳಿದ್ದಲ್ಲಿ ಕೆಲವರು ಅಲ್ಲಿಗೆ ಹೋಗಿ ಸಹಿ ಪಡೆಯುತ್ತಾರೆ. ಮಹಿಳೆಯರು, ವೃದ್ದರು, ಅಂಗವಿಕಲರು ಮಸ್ಕಿಗೆ ಹೋಗಲು ಸಾಧ್ಯವೆ’ ಎಂದು ಮಂಜುಳಾ, ಅಶೋಕ, ಕುಮಾರ ರಾಮಲದಿನ್ನಿ, ಅಮರೇಶ ಜಂಗಮರಹಳ್ಳಿ, ಮುದಕಪ್ಪ ಮತ್ತು ಅರಳಪ್ಪ ಯದ್ದಲದಿನ್ನಿ ಪ್ರಶ್ನಿಸಿದರು.
ಅಧಿಕಾರಿಗಳು ಕಚೇರಿಗೆ ಬಾರದ ಕುರಿತು ಮಾಹಿತಿ ನೀಡಿದರೂ ಹಿರಿಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ವಲ್ಪ ತಡವಾಗಿರಬಹುದು. ಬರುತ್ತಾರೆ ಬಿಡಿ ಎನ್ನುತ್ತಾರೆಸಿದ್ದಾರ್ಥ ಪಾಟೀಲ ಹಾಲಾಪುರ
ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಿ ಜಿಪಿಎಸ್ ಫೋಟೊ ಕಳುಹಿಸಲು ಅಧಿಕಾರಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದುಮಂಜುನಾಥ ಭೋಗಾವತಿ ಮಸ್ಕಿ ತಹಶೀಲ್ದಾರ್