ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟವರನ್ನು ಹಾಸನ ಮೂಲದ ಅಜಿತ್ (20), ಸಚಿನ್ (20) ಹಾಗೂ ಪ್ರಮೋದ (19) ಎಂದು ಗುರುತಿಸಲಾಗಿದೆ.
ಹಾಸನದ ಐವರು ಯವಕರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ರಾಯರ ಮಠಕ್ಕೆ ಬಂದಿದ್ದರು. ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ರಾಯರ ದರ್ಶನ ಪಡೆದಿದ್ದರು. ಸಂಜೆ ಊರಿಗೆ ಮರಳು ಮೊದಲು ನದಿಯಲ್ಲಿ ಮತ್ತೊಮ್ಮೆ ಸ್ನಾನ ಮಾಡಲು ನಿರ್ಧರಿಸಿದ್ದರು. ಐವರಲ್ಲಿ ನೀರಿಗೆ ಇಳಿದ ಮೂವರು ನೀರು ಪಾಲಾಗಿದ್ದರು. ಮುಳುಗು ತಜ್ಞರು ಹಾಗೂ ಪೊಲೀಸರು ನದಿಯಲ್ಲಿ ಶೋಧ ನಡೆಸಿದರೂ ಯುವಕರ ಪತ್ತೆಯಾಗಿರಲಿಲ್ಲ.
ಭಾನುವಾರ ಆಂಧ್ರಪ್ರದೇಶದ ಎಸ್‌ಡಿಆರ್‌ಎಫ್ ತಂಡವು ಯುವಕರು ಮುಳುಗಿದ ಜಾಗದಲ್ಲೇ ಶೋಧ ನಡೆಸಿದಾಗ ಯುವಕರ ಶವಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಸಂಬಂಧಿಗಳಿಗೆ ಹಸ್ತಾರಿಸಲಾಯಿತು.
ಮೃತರ ಸಂಬಂಧಿಗಳು ಹಾಸನದಿಂದ ಬಂದು ನದಿ ತಡದಲ್ಲಿ ಕುಳಿತಿದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.