
ಹಟ್ಟಿ ಚಿನ್ನದ ಗಣಿ: ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ವಾರದ ಸಂತೆಯಲ್ಲಿ ವ್ಯಾಪಾರಿಗಳು ರಸ್ತೆ ಬದಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಪ್ರತಿ ವಾರ ನೂರಾರು ಜನರು ಹಣ್ಣು–ತರಕಾರಿ ಸೇರಿದಂತೆ ವಿವಿಧ ಬಗೆಯ ವಸ್ತುಗಳ ಮಾರಾಟಕ್ಕೆ ಬರುತ್ತಾರೆ. ಅವುಗಳನ್ನು ಕೊಳ್ಳಲು ದೇವದುರ್ಗ, ಗುರುಗುಂಟಾ, ಪಾಮನಕಲ್ಲೂರು, ಚಿಂಚರಕಿ ಹಾಗೂ ಸುತ್ತಲಿನ ಗ್ರಾಮಗಳ ಜನರು ಬರುತ್ತಾರೆ.
‘ಸಂತೆ ಮೈದಾನದಲ್ಲಿ ಸಾಕಷ್ಟು ಜಾಗವಿದ್ದರೂ ಕೆಲವರು ರಸ್ತೆಯ ಅಕ್ಕಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಅವರನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹೋರಾಟಗಾರ ಮಲ್ಲಿಕಾರ್ಜುನ ಕಡೆಚೂರು ಒತ್ತಾಯಿಸಿದ್ದಾರೆ.
‘ಹಳೆ ಬಸ್ ನಿಲ್ದಾಣದ ಮುಖ್ಯ ರಸ್ತೆ, ಲಿಂಗಸುಗೂರು ಹಾಗೂ ಕೋಠಾ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಎರಡೂ ಬದಿಯಲ್ಲಿಯೂ ವ್ಯಾಪಾರಿಗಳು ವಾಹನ ನಿಲ್ಲಿಸಿಕೊಂಡು ವ್ಯಾಪಾರ ಮಾಡಿದರೆ, ಮತ್ತೆ ಕೆಲವರು ಅಂಗಡಿಗಳನ್ನು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ವಸ್ತುಗಳನ್ನು ಕೊಂಡುಕೊಳ್ಳುವವರು ಅಂಗಡಿ ಮುಂದೆ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಮಧ್ಯೆ ಜಗಳವಾದ ಉದಾಹರಣೆಗಳಿವೆ. ಆದರೆ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಸಾರ್ವಜನಿಕರು ದೂರಿದ್ದಾರೆ.
‘ಟಿಪ್ಪರ್, ಲಾರಿ, ಬಸ್ ಸೇರಿದಂತೆ ಭಾರಿ ವಾಹನಗಳು ಸಂತೆ ಮೈದಾನದ ರಸ್ತೆಯಲ್ಲಿ ಸಂಚರಿಸುತ್ತವೆ. ಇದರಿಂದ ವಾಹನ ಚಾಲನೆ ಹಾಗೂ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲಿ ಸಂಚರಿಸುವುದಕ್ಕೆ ಹರಸಾಹಸ ಪಡಬೇಕಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವವರನ್ನು ಸಂತೆ ಮೈದಾನಕ್ಕೆ ಕಳುಹಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.