
ಹಟ್ಟಿ ಚಿನ್ನದ ಗಣಿ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಡಾಂಬರು ಪದರು ಕಿತ್ತು, ಗುಂಡಿಗಳು ಬಿದ್ದಿವೆ. ಜಲ್ಲಿ ಕಲ್ಲುಗಳು ಎದ್ದಿರುವ ಕಾರಣ ವಾಹನ ಸಂಚಾರ ಕಷ್ಟಕರವಾಗಿದೆ.
ಆನ್ವರಿ, ಗುರುಗುಂಟಾ, ಪಾಮನಕೆಲ್ಲೂರು, ಗುಡದನಾಳ, ಗೌಡೂರು, ಕೋಠಾ ರಸ್ತೆಯನ್ನು 15 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ರಸ್ತೆ ತುಂಬಾ ಗುಂಡಿಗಳು ಬಿದ್ದಿವೆ. ಜಲ್ಲಿ ಕಲ್ಲುಗಳು ಎದ್ದಿರುವ ಕಾರಣ ಬಸ್ ಓಡಿಸಲು ಕೆಕೆಆರ್‌ಟಿಸಿ ಬಸ್ ಘಟಕದವರು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ವಾಹನಗಳ ಓಡಾಟವೂ ವಿರಳವಾಗಿದೆ. ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಸ್ತೆಯಲ್ಲಿ ಆಳವಾದ ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳೂ ಇವೆ. ಬೇಸಿಗೆಯಲ್ಲಿ ದೂಳು ಹೆಚ್ಚಾಗುತ್ತದೆ. ಈ ಮಾರ್ಗದಲ್ಲಿ ಸಂಚರಿಸಿ ಹೈರಾಣಾಗಿರುವ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.
ರೋಗಿಗಳ ಪರದಾಟ: ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಚಿಕಿತ್ಸೆ ಪಡೆಯ ಲು ಬರುತ್ತಾರೆ. ಹದಗೆಟ್ಟ ರಸ್ತೆಯಲ್ಲಿ ಪ್ರಯಾಣಿಸುವುದರಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ. ತುರ್ತು ಸಂಧರ್ಭಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ ಕೋಠಾ ಗ್ರಾಮಸ್ಥರು.
ರಸ್ತೆ ದುರಸ್ತಿಗಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳುವವರೇ ಇಲ್ಲವಾಗಿದೆ ಎನ್ನುತ್ತಾರೆ ಸುತ್ತಮುತ್ತಲಿನ ಗ್ರಾಮಸ್ಥರು.
ರಸ್ತೆ ದುರಸ್ತಿಗೆ ಸಾಕಷ್ಟು ಅನುದಾನ ಬರುತ್ತದೆ. ಆದರೆ, ಉತ್ತಮ ರಸ್ತೆ ನಿರ್ಮಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ತಗ್ಗು–ಗುಂಡಿಗಳನ್ನು ಮುಚ್ಚಲೂ ಮುಂದಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹಟ್ಟಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕುಚನ್ನಬಸವ ಕೋಠಾ ಗ್ರಾಮಸ್ಥ
ಕೋಠಾ ಗುಡದನಾಳ ಆನ್ವರಿ ರಸ್ತೆಗಳು ಹಾಳಾದ ಕುರಿತು ಜನರಿಂದ ದೂರುಗಳು ಬಂದಿವೆ. ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದುಬಸವರಾಜ ಬಸ್ತಾನಿ ಜೆಇ ಲೋಕೋಪಯೋಗಿ ಇಲಾಖೆ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.