ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣವನ್ನು ತಾಲ್ಲೂಕು ಕೇಂದ್ರ ಘೋಷಿಸಲು ಮುಂದಾಗಬೇಕೆಂಬ ಕೂಗು ಜನರಿಂದ ಹೆಚ್ಚಾಗಿದೆ.
ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನ ನಾನಾ ದಾಖಲಾತಿ ಹಾಗೂ ಸೌಲಭ್ಯಗಳಿಗಾಗಿ ಗುರುಗುಂಟಾ, ಲಿಂಗಸುಗೂರು ತಾಲ್ಲೂಕಿಗೆ ಅಲೆದಾಡುವಂತಾಗಿದೆ.
ಹಟ್ಟಿ ಪಟ್ಟಣದಲ್ಲಿ 50 ಸಾವಿರ ಜನಸಂಖ್ಯೆ ಇದೆ. ಅಲ್ಲದೇ, ಹಟ್ಟಿ ಪಟ್ಟಣ ಸೇರಿದಂತೆ 8 ಗ್ರಾಮ ಪಂಚಾಯಿತಿ, 190 ದೊಡ್ಡಿಗಳು, 15 ಪ್ರೌಢ ಶಾಲೆ, ಪಿಯು ಕಾಲೇಜುಗಳನ್ನು ಹೊಂದಿದೆ.
ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ರಾಜ್ಯಕ್ಕೆ ಪ್ರತಿವರ್ಷ ₹570 ಕೋಟಿ ತೆರಿಗೆ ಪಾವತಿ ಆಗುತ್ತದೆ. ಇಷ್ಟು ಅರ್ಹತೆ ಹೊಂದಿದರೂ ಇದುವರೆಗೆ ತಾಲ್ಲೂಕು ಕೇಂದ್ರ ಮಾಡಲು ಯಾವುದೇ ಸರ್ಕಾರ ಮುಂದಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಹಟ್ಟಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲಿ ಎನ್ನುವ ಕೂಗು ಜೋರಾಗಿದ್ದು ಹೋರಾಟದ ಕಿಚ್ಚು ಜೋರಾಗಿದೆ.
ಹಟ್ಟಿ ಚಿನ್ನದ ಗಣಿಗೆ ಒಂದು ಇತಿಹಾಸ ಇದೆ. ಇಲ್ಲಿ ಚಿನ್ನದ ಗಣಿ ಉದ್ಯಮವಿದೆ. ಈ ಉದ್ಯಮವನ್ನು ಅವಲಂಬಿಸಿ ನೂರಾರು ಕುಟುಂಬಗಳು ನೆಲೆಸಿವೆ. ಅನೇಕ ಶಾಲಾ-ಕಾಲೇಜುಗಳಿವೆ. ಶಾಲಾ ಪ್ರಮಾಣ ಪತ್ರಗಳಿಗಾಗಿ ವಿದ್ಯಾರ್ಥಿಗಳು, ಪಿಂಚಣಿ ಸೌಲಭ್ಯಕ್ಕಾಗಿ ವಯೋವೃದ್ಧರು ಅಲೆದಾಡುವಂತಾಗಿದೆ. ಪೊಲೀಸ್ ಠಾಣೆ ಸೇರಿ ಎಲ್ಲ ಅರ್ಹತೆ ಇದ್ದರೂ ಸರ್ಕಾರ ತಾಲ್ಲೂಕು ಕೇಂದ್ರವೆಂದು ಘೋಷಿಸಲು ಮೀನಮೇಷ ಮಾಡುತ್ತಿದೆ.
ಜನಸಂಖ್ಯೆ ಆಧರಿಸಿ ಇನ್ನು ಕೆಲವೇ ತಿಂಗಳಲ್ಲಿ ಹಟ್ಟಿ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದರೂ ಆಶ್ಚರ್ಯವಿಲ್ಲ. ಏಕೆಂದರೆ ಈಗಾಗಲೇ ಪೌರಾಡಳಿತ ಇಲಾಖೆಯಿಂದ ಈ ಬಗ್ಗೆ ವರದಿ ಕೇಳಿದ್ದು, ಕೋಠಾ ಮೇದಿನಾಪುರ ಗ್ರಾಮಗಳನ್ನು ಪುರಸಭೆಗೆ ಸೇರಿಸಿ ಘೋಷಿಸಬಹುದೆಂದು ಈಗಿನ ಪಟ್ಟಣ ಪಂಚಾಯಿತಿ ಆಡಳಿತ ವರದಿ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಹಟ್ಟಿ ಪಟ್ಟಣಕ್ಕೆ ಬರಲಿದ್ದು, ಇಲ್ಲಿನ ಜನರಿಗೆ ಸಿಹಿ ಸುದ್ದಿ ನೀಡಲಿ ಎಂದುಕಾದು ನೊಡುತ್ತಿದ್ದಾರೆ.
ಹಟ್ಟಿ ಚಿನ್ನದ ಗಣಿ ಪಟ್ಟಣವನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಜನಸಂಖ್ಯೆ ಆಧರಿಸಿ ಘೋಷಿಸದಿದ್ದಲ್ಲಿ ನಾನಾ ಸಂಘಟನೆಗಳು ಸೇರಿ ಹೋರಾಟಕ್ಕಿಳಿಯಲಿದ್ದಾರೆಶಿವರಾಜ ಕಂದಗಲ್ ಸಾಮಾಜಿಕ ಹೋರಾಟಗಾರ ಹಟ್ಟಿ
ಹಟ್ಟಿ ಚಿನ್ನದ ಗಣಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಲು ಎಲ್ಲ ರೀತಿಯಿಂದಲೂ ಅರ್ಹತೆ ಹೊಂದಿದೆ. ಸರ್ಕಾರಕ್ಕೆ ಒತ್ತಡ ಹಾಕಿ ಮುಂದಿನ ಅಧಿವೇಶನದಲ್ಲಿ ಧ್ವನಿ ಎತ್ತುವೆಮಾನಪ್ಪ ಡಿ.ವಜ್ಜಲ್ ಲಿಂಗಸುಗೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.