ADVERTISEMENT

ಭಾರಿ ಮಳೆ: ಕಟಾವಿಗೆ ಬಂದ ಭತ್ತದಲ್ಲಿಯೇ ಮೊಳಕೆ

ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು

ಡಿ.ಎಚ್.ಕಂಬಳಿ
Published 21 ನವೆಂಬರ್ 2021, 14:15 IST
Last Updated 21 ನವೆಂಬರ್ 2021, 14:15 IST
ಸಿಂಧನೂರು ತಾಲ್ಲೂಕಿನ ಗಾಂಧಿನಗರದ ಗೋಪಿನೀಡಿಕೃಷ್ಣ ಅವರ 25 ಎಕರೆ ಜಮೀನಿನಲ್ಲಿ ಹಾಳಾಗಿರುವ ಭತ್ತದ ಬೆಳೆ
ಸಿಂಧನೂರು ತಾಲ್ಲೂಕಿನ ಗಾಂಧಿನಗರದ ಗೋಪಿನೀಡಿಕೃಷ್ಣ ಅವರ 25 ಎಕರೆ ಜಮೀನಿನಲ್ಲಿ ಹಾಳಾಗಿರುವ ಭತ್ತದ ಬೆಳೆ   

ಸಿಂಧನೂರು: ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ತಾಲ್ಲೂಕಿನಾದ್ಯಂತ ಹಲವಾರು ಕಡೆ ಭತ್ತದ ಬೆಳೆ ನೆಲಕ್ಕುರುಳಿ ಬಿದ್ದಿದ್ದು, ಇನ್ನು ಕೆಲವು ಕಡೆ ಬೆಳೆದು ನಿಂತ ಭತ್ತದಲ್ಲಿಯೇ ಮೊಳಕೆ ಹೊಡೆದಿರುವುದರಿಂದ ರೈತರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಗಾಂಧಿನಗರ, ಗೊರೇಬಾಳ, ಜಾಲಿಹಾಳ, ಹಂಚಿನಾಳ, ಸಾಸಲಮರಿ, ಮಲ್ಕಾಪುರ, ಬೂದಿವಾಳ, ತಿಡಿಗೋಳ, ಕುರುಕುಂದಿ, ಪಗಡದಿನ್ನಿ, ದೇವಿಕ್ಯಾಂಪ್, ಬೊಮ್ಮನಾಳ, ಕುನ್ನಟಗಿ, ಬಸಾಪುರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿಯೂ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದೆ. ಈಗಾಗಲೇ ಕೊಯ್ಲೆಗೆ ಬಂದಿದ್ದ ಭತ್ತವನ್ನು ಒಂದೆರೆಡು ದಿನಗಳಲ್ಲಿ ಕಟಾವ್ ಮಾಡಬೇಕೆಂದು ರೈತರ ಯೋಚಿಸಿದ್ದರು. ಅಷ್ಟರಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಫಸಲಿಗೆ ಬಂದ ಬೆಳೆ ಹಾನಿಯಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ತಾಲ್ಲೂಕಿನಲ್ಲಿ ಬೆಳೆದ ಭತ್ತದ ಪೈಕಿ ಶೇ 50 ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ADVERTISEMENT

ಇದಲ್ಲದೆ ನೀರಾವರಿ ಪ್ರದೇಶ ಅಲ್ಲದೆ ಒಣಬೇಸಾಯ ಪ್ರದೇಶವಾಗಿರುವ ಬುಕ್ಕನಹಟ್ಟಿ, ಗೊರಲೂಟಿ, ಕರಡಚಿಲುಮಿ, ವೀರಾಪುರ, ಮುಳ್ಳೂರು ಸೇರಿದಂತೆ ತುರ್ವಿಹಾಳ ಮತ್ತು ಗುಡದೂರು ಹೋಬಳಿ ಪ್ರದೇಶದಲ್ಲಿಯೂ ಬೆಳೆದ ತೊಗರಿ ಬೆಳೆ ಅಪಾರ ಹಾನಿಯುಂಟಾಗಿದೆ.

ಪ್ರತಿ ಎಕರೆಗೆ ತೊಗರಿ ಬೆಳೆಗೆ ₹ 15 ಸಾವಿರದಿಂದ ₹ 20 ಸಾವಿರದ ವರೆಗೆ ಖರ್ಚಾಗಿದ್ದು, ಮಳೆಯ ಕಾರಣದಿಂದ ಬೆಳೆದ ತೊಗರಿಯಲ್ಲಿಯೂ ಮೊಳಕೆ ಹೊಡೆದಿವೆ. ಹೀಗಾರಿ ರೈತರು ತಲೆ ಮೇಲೆ ಕೈ ಇಟ್ಟುಕೊಂಡು ಮುಗಿಲು ನೋಡುವಂತಹ ದುಸ್ಥಿತಿ ಎದುರಾಗಿದೆ.

ಅಕಾಲಿಕ ಮಳೆಯಿಂದ ರೈತಾಪಿ ವರ್ಷ ಸಂಕಷ್ಟಕ್ಕಿ ಸಿಲುಕಿದ ಹಿನ್ನೆಲೆಯಲ್ಲಿ ಈಗಾಗಲೇ ಎರಡು ದಿನದಿಂದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಜಿಲ್ಲಾಡಳಿತ ಆದಷ್ಟು ಶೀಘ್ರ ಬೆಳೆಹಾನಿ ಸರ್ವೆ ಕಾರ್ಯ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವ ಮೂಲಕ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಸಾಸಲಮರಿ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.