ADVERTISEMENT

ಅಕಾಲಿಕ ಮಳೆಯಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 13:18 IST
Last Updated 30 ಏಪ್ರಿಲ್ 2021, 13:18 IST
ಮಾನ್ವಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಾಶಿ ಮಾಡಿರುವ ಭತ್ತ
ಮಾನ್ವಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ರಾಶಿ ಮಾಡಿರುವ ಭತ್ತ   

ಮಾನ್ವಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಗುರುವಾರ ಸಂಜೆ ಸುರಿದ ಅಕಾಲಿಕ ಮಳೆಗೆ ಮರ-ಗಿಡಗಳು ಉರುಳಿ ಬಿದ್ದಿವೆ.

ತಾಲ್ಲೂಕಿನ ಆಲ್ದಾಳ, ಗವಿಗಟ್, ಸಿರವಾರ ತಾಲ್ಲೂಕಿನ ಬಲ್ಲಟಗಿ ಭಾಗದಲ್ಲಿರೈತರು ತಮ್ಮ ಜಮೀನುಗಳಲ್ಲಿ ರಾಶಿ ಮಾಡಿದ್ದ ಭತ್ತಕ್ಕೆ ಹಾನಿಯಾಗಿದೆ.

ಉತ್ತಮ ಇಳುವರಿ ಬಂದಿದ್ದರೂ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಮಳೆಯಿಂದಾದ ಹಾನಿ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ ಎಂದು ರೈತ ವೆಂಕಟೇಶ ದೇವತಗಲ್ ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಮಾನ್ವಿ ಪಟ್ಟಣದಲ್ಲಿ ಹಲವೆಡೆ ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿದ್ದು, ರಾತ್ರಿಯಿಡೀ ವಿದ್ಯುತ್ ಪೂರೈಕೆಗೆ ತೊಂದರೆಯಾಯಿತು.

ಶುಕ್ರವಾರವೂ ಹಲವು ಬಾರಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದ್ದಾರೆ.

ಬೆಲೆ ಕಡಿಮೆಯಾಗುವ ಆತಂಕ

ದೇವತಗಲ್ (ಕವಿತಾಳ): ಸಿರವಾರ ತಾಲ್ಲೂಕಿನ ದೇವತಗಲ್, ಹಿರೇಬಾದರದಿನ್ನಿ ಮತ್ತು ಬಾಗಲವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ಕಟಾವು ಮಾಡಿ ಒಣಗಲು ಹಾಕಿದ್ದ ಭತ್ತ ತೊಯ್ದು ನಷ್ಟ ಉಂಟಾಗಿದೆ.

ಭತ್ತ ಕಟಾವು ಮಾಡಿ ಬಿಸಿಲಿಗೆ ಒಣಗಲು ಹಾಕಿದ್ದ ರೈತರು ದರ ಏರಿಕೆ ನಿರೀಕ್ಷೆಯಲ್ಲಿದ್ದರೂ, ಇದೀಗ ಮಳೆಯಿಂದ ಭತ್ತ ತೊಯ್ದು ಹಾಳಾಗಿದೆ. ಖರೀದಿದಾರರು ಭತ್ತ ಖರೀದಿಗೆ ಮುಂದಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಕಾವೇರಿ ಸೋನಾ, ಆರ್.ಎನ್‍.93 ತಳಿಯ ಭತ್ತದ ದರ ಮಾರುಕಟ್ಟೆಯಲ್ಲಿ ಕಳೆದ ವಾರ 75 ಕೆ.ಜಿ ಗೆ ₹1330 ಇದ್ದದ್ದು ಇದೀಗ ₹1190 ಕ್ಕೆ ಕುಸಿತವಾಗಿದೆ ಮತ್ತು ಮಳೆಯಿಂದ ತೊಯ್ದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಕಡಿಮೆಯಾಗಿರುವುದು ಆತಂಕ ತಂದಿದೆ’ ಎಂದು ರೈತರಾದ ತಿರುಪತಿ ಪೂಜಾರಿ, ಯಮನೂರು ಇಳಿಗೇರ, ಪಂಪನಗೌಡ, ದೇವರಾಜ ಇಳಿಗೇರ, ಬಾಲರಾಜ ನಾಯಕ ಮತ್ತು ರಾಮಯ್ಯ ನಡಗಿನ ಹೇಳಿದರು.

‘ಭತ್ತವನ್ನು ಬಿಸಿಲಿಗೆ ಒಣಗಲು ಹಾಕಿದ್ದ ರೈತರು ಭತ್ತದ ರಕ್ಷಣೆಗೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ ಮಳೆಯಿಂದ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಮಾಡುವುದು ಸೇರಿದಂತೆ ನಷ್ಟ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.