ADVERTISEMENT

‘ಫ್ರೂಟ್ಸ್’ನಲ್ಲಿ ನೋಂದಣಿಗೆ ರೈತರಿಗೆ ನೆರವಾಗಿ: ಶಾಸಕ ಬಸನಗೌಡ ದದ್ದಲ್ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 15:48 IST
Last Updated 8 ಜನವರಿ 2024, 15:48 IST
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು
ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು   

ರಾಯಚೂರು: ‘ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ರೈತರಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಬೆಳೆನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಸಿಗುವಂತೆ ಕ್ರಮಕೈಗೊಳ್ಳಬೇಕು’ ಎಂದು ರಾಯಚೂರು ಗ್ರಾಮೀಣ ಮತಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಅವರು ಮಾತನಾಡಿದರು.

‘ರೈತರು ಕಡ್ಡಾಯವಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ಸಾಗುವಳಿ ಭೂಮಿಗಳ ವಿವರಗಳನ್ನು ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಬೇಕು. ಅನೇಕ ರೈತರು ಹೆಚ್ಚಾಗಿ ನದಿ ತೀರದಲ್ಲಿ ತಮ್ಮ ಜಮೀನುಗಳಿಗೆ ಪಂಪ್‍ಸೆಟ್‍ಗಳನ್ನು ಬಳಸಿಕೊಂಡು ವ್ಯವಸಾಯ ಮಾಡುತ್ತಾರೆ. ಅಂತಹ ರೈತರ ಜಮೀನುಗಳನ್ನು ಸಹಿತ ನೀರಾವರಿ ಜಮೀನುಗಳೆಂದು ಪರಿಗಣಿಸಬೇಕು’ ಎಂದರು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಕೈಗೊಳ್ಳಲಾದ ವಿವಿಧ ಇಲಾಖೆಗಳ ಬಾಕಿ ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು. ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ಮುಗಿದ ತಕ್ಷಣ ರಸ್ತೆಗಳನ್ನು ದುರಸ್ತಿಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕೆಡಿಪಿ ಸಭೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಗೈರಾದ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದೇ ರೀತಿಯಾಗಿ ಮರಳು ಅಕ್ರಮವಾಗಿ ಸಾಗಾಣಿಕೆ ಆಗದಂತೆ ನೋಡಿಕೊಳ್ಳಬೇಕು. ಮರಳು ಸಾಗಿಸುವ ವಾಹನಗಳು ಹಳ್ಳಿಗಳ ಒಳಗಿನಿಂದ ಹೋಗುವುದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತಿವೆ. ಅಂತಹ ವಾಹಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ತಾಲ್ಲೂಕು ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಸದಸ್ಯರಿಗೆ ಗೌರವ:

ಸಭೆಯಲ್ಲಿ ತಾಲ್ಲೂಕುಮಟ್ಟದ ಕೆಡಿಪಿ ಸಮಿತಿಗೆ ನಾಮನಿರ್ದೇಶಿತಗೊಂಡ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ, ಪುಷ್ಪ ಗುಚ್ಚ ನೀಡಿ ಸ್ವಾಗತಿಸಲಾಯಿತು.

ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಆರ್‌ಎಪಿಎಂಸಿ ಅಧ್ಯಕ್ಷ ಜಯಂತರಾವ್ ಪತಂಗೆ, ಎಪಿಎಂಸಿ ಉಪಾಧ್ಯಕ್ಷ ಬಸೀರ್‌ಅಹ್ಮದ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಸ್ವಾಮಿ ಅಲ್ಕೂರ, ಕೆಡಿಪಿ ಸಮಿತಿ ಸಭೆಯ ಸದಸ್ಯರಾದ ಪಲ್ಲವಿ ಯದ್ಲಾಪೂರ, ಸುರೇಶ ಯಾಪಲದಿನ್ನಿ, ತಿಮ್ಮಪ್ಪ ನಾಯಕ ಆತ್ಕೂರ, ಫಾರೂಕ್ ಹುಸೇನ್ ಯರಗೇರಾ, ಜಿಂದಪ್ಪ ಹೊಸಪೇಟೆ, ಶರಣಬಸವ ಜಿ.ತಿಮ್ಮಾಪೂರ, ಸಹಾಯಕ ಆಯುಕ್ತೆ ಮಹಿಬೂಬಿ, ತಹಶೀಲ್ದಾರ್ ಸುರೇಶ ವರ್ಮಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ರಾಯಚೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.