
ಹಟ್ಟಿ ಚಿನ್ನದ ಗಣಿ: 30ಕ್ಕೂ ಹೆಚ್ಚು ಗ್ರಾಮಗಳ ವ್ಯಾಪಾರ ವಹಿವಾಟು ಕೇಂದ್ರವಾದ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಬೇಕು ಎನ್ನುವ ಕೂಗು ಹೆಚ್ಚಾಗಿದೆ.
2017ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಂದಿನ ಜಿಲ್ಲಾಧಿಕಾರಿಗೆ ಹೊಸ ಹೋಬಳಿ ರಚನೆಗೆ ಇರುವ ನಿಮಯ–ಮಾನದಂಡಗಳ ಪ್ರಕಾರ ವರದಿ ನೀಡುವಂತೆ ಪತ್ರ ಬರೆದಿದ್ದರು. 9 ವರ್ಷ ಕಳೆದರೂ ಯಾವ ಪ್ರಕ್ರಿಯೆ ನಡೆದಿಲ್ಲ.
2016ರಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ತನ್ವೀರ್ ಶೇಠ್ ಹಾಗೂ ಕಂದಾಯ ಮಂತ್ರಿ ತಿಮ್ಮಪ್ಪ ಅವರಿಗೆ ಕಾಂಗ್ರೆಸ್ ಮುಖಂಡ ಮೌಲಾಸಾಬ್ ಪತ್ರ ಬರೆದಿದ್ದರು. ತನ್ವೀರ್ ಶೇಠ್ ಮನವಿ ಮೇರಿಗೆ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ನಿರ್ಧರಿಸಿ ಸಂಬಂದಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕಂದಾಯ ಸಚಿವರಿಗೆ ಪತ್ರ ಬರೆದರೂ ಯಾವುದೇ ಪ್ರಯೊಜನವಾಗಲಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ರೋಡಲಬಂಡ, ಕಡ್ಡೋಣಿ,ಮೇದಿನಾಪೂರ, ಕೋಠಾ, ಆನ್ವರಿ, ಚುಕನಟ್ಟಿ ,ಗೆಜ್ಜಲಗಟ್ಟಾ, ನಿಲೋಗಲ್, ವಿರಾಪೂರ,ಚಿಕ್ಕನಗನೂರು, ಹೀರೆ ನಗನೂರು, ಯಲಗಟ್ಟಾ ಸೇರಿದಂತೆ ವಿವಿಧ ಗ್ರಾಮಗಳನ್ನು ಜನಸಂಖ್ಯೆ ಬೌಗೋಳಿಕ ಕ್ಷೇತ್ರದ ಮೂಲಕ ಹೊಸ ಹೋಬಳಿ ಕೇಂದ್ರಕ್ಕೆ ಮಾಡಬಹದು ಎಂದು ಗ್ರಾಮದ ವರದಿ ನೀಡಲಾಗಿತ್ತು.
ಹಟ್ಟಿ ಪಟ್ಟಣದಿಂದ 12 ಕಿ.ಮೀ ದೂರದ ಗುರುಗುಂಟಾ ಗ್ರಾಮಕ್ಕೆ ಪಹಣಿ, ಆದಾಯ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಪಡೆಯಲು ಪಡೆಯಲು ವಿದ್ಯಾರ್ಥಿಗಳು ಹಾಗೂ ರೈತರು ಹೋಗಬೇಕಾಗಿದೆ.
ಈಗಿನ ಸರ್ಕಾರವಾದರೂ ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಮುಂದಾಗಲಿ ಎನ್ನುವುದು ಜನರ ಆಗ್ರಹ.
ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜನ ಪರದಾಡುತ್ತಿದ್ದಾರೆ–ಶಿವರಾಜ ಕಂದಗಲ್, ಸಾಮಾಜಿಕ ಹೋರಾಟಗಾರ
ಬಹುದಿನಗಳ ಬೇಡಿಕೆಯಾದ ಹೋಬಳಿ ಕೇಂದ್ರ ಸ್ಧಾಪನೆ ಬೇಡಿಕೆಯನ್ನು ಸಿಎಂ ಅವರು ಈಡೇರಿಸಿದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ–ಶಿವರಾಜಗೌಡ ಗುರಿಕಾರ, ರಾಜ್ಯ ರೈತ ಸಂಘದ ಹಟ್ಟಿ ಘಟಕದ ಅಧ್ಯಕ್ಷ
ಹಟ್ಟಿ ಪಟ್ಟಣವನ್ನು ಹೋಬಳಿ ಕೇಂದ್ರ ಮಾಡಲು ಜನರಿಂದ ಹಲವು ಮನವಿ ಪತ್ರಗಳು ಬಂದಿವೆ. ಹಿಂದಿನ ತಹಶೀಲ್ದಾರ್ ಅವರ ವರದಿ ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು–ಸತ್ಯಮ್ಮ ಲಿಂಗಸುಗೂರುಮ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.