ADVERTISEMENT

ಸಿಗದ ಹಕ್ಕುಪತ್ರ; ತಪ್ಪದ ಸಂತ್ರಸ್ತರ ಪರದಾಟ

ಚಿಕ್ಕ ಉಪ್ಪೇರಿ ಬಲದಂಡೆ ನಾಲೆ ಸಂತ್ರಸ್ತರಿಗೆ ಹಸ್ತಾಂತರವಾಗದ ಮನೆಗಳು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಜುಲೈ 2021, 4:16 IST
Last Updated 11 ಜುಲೈ 2021, 4:16 IST
ಲಿಂಗಸುಗೂರು ತಾಲ್ಲೂಕು ಚಿಕ್ಕ ಉಪ್ಪೇರಿ ಪುನರ್ವಸತಿ ಯೋಜನೆಯಡಿ ನಿರ್ಮಾಣವಾದ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಸುತ್ತಲೂ ಮುಳ್ಳು ಕಂಟೆ ಬೆಳೆದಿವೆ
ಲಿಂಗಸುಗೂರು ತಾಲ್ಲೂಕು ಚಿಕ್ಕ ಉಪ್ಪೇರಿ ಪುನರ್ವಸತಿ ಯೋಜನೆಯಡಿ ನಿರ್ಮಾಣವಾದ ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ. ಸುತ್ತಲೂ ಮುಳ್ಳು ಕಂಟೆ ಬೆಳೆದಿವೆ   

ಲಿಂಗಸುಗೂರು: ಅತಿವೃಷ್ಟಿ ಮತ್ತು ನಾರಾಯಣಪುರ ಬಲದಂಡೆ ನಾಲೆ ಬಸಿ ನೀರಿನಿಂದ ಬಸವಳಿದಿದ್ದ ತಾಲ್ಲೂಕಿನ ಚಿಕ್ಕ ಉಪ್ಪೇರಿ ಸಂತ್ರಸ್ತರಿಗೆ ದಶಕ ಕಳೆದರೂ ಹಕ್ಕುಪತ್ರಗಳ ಹಂಚಿಕೆ ಆಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.

2009ರಲ್ಲಿ ತಾಲ್ಲೂಕಿನ ಚಿಕ್ಕ ಉಪ್ಪೇರಿ, ಸುಣಕಲ್‍ ಮತ್ತು ಕಾಳಾಪುರ ಗ್ರಾಮಗಳ ಸಂತ್ರಸ್ತ ಕುಟುಂಬಗಳಿಗೆ ಆಸರೆ ಯೋಜನೆಯಡಿ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಹಟ್ಟಿ ಚಿನ್ನದ ಗಣಿ ನೀಡಿದ್ದ ದೇಣಿಗೆಯಲ್ಲಿ ಬಳ್ಳಾರಿ ಬಿನ್ಯಾಸ್‍ ಕನ್‍ಸ್ಟ್ರಕ್ಷನ್‍ ಸಂಸ್ಥೆ ಹಾಗೂ ಭೂ ಸೇನಾ ನಿಗಮಕ್ಕೆ ಮನೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿತ್ತು.

ಸುಣಕಲ್‌ದಲ್ಲಿ 17.39 ಎಕರೆಯಲ್ಲಿ 200 ಮನೆ, ಕಾಳಾಪುರದಲ್ಲಿ 2.30 ಎಕರೆಯಲ್ಲಿ 38 ಮನೆ ಹಾಗೂ ಚಿಕ್ಕ ಉಪ್ಪೇರಿಯಲ್ಲಿ 17.18 ಎಕರೆಯಲ್ಲಿ 150 ಮನೆಗಳ ನಿರ್ಮಾಣಕ್ಕೆ ಜಮೀನು ಖರೀದಿಸಲಾಗಿತ್ತು. ಕಾಳಾಪುರದಲ್ಲಿ ಭೂ ಸೇನಾ ನಿಗಮ 38 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದು, ಅಗತ್ಯ ಸೌಲಭ್ಯಗಳನ್ನು ತಾಲ್ಲೂಕು ಆಡಳಿತ ಕಲ್ಪಿಸಿದೆ.

ADVERTISEMENT

ಸುಣಕಲ್‍ ಮತ್ತು ಚಿಕ್ಕ ಉಪ್ಪೇರಿ 350 ಮನೆಗಳ ನಿರ್ವಹಣೆ ಬಿನ್ಯಾಸ್‍ ಕನ್‍ಸ್ಟ್ರಕ್ಷನ್‍ ಸಂಸ್ಥೆಗೆ ಕೊಡಲಾಗಿತ್ತು. 2013ರಲ್ಲಿ ಸುಣಕಲ್‍ ಪುನರ್ವಸತಿ ಬಡಾವಣೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಫಲಾನುಭವಿಗಳ ಆಯ್ಕೆಯ ರಾಜಕೀಯ ಮೇಲಾಟ, ಕಳಪೆ ಕಾಮಗಾರಿ ಆರೋಪದಿಂದ ಮನೆಗಳ ಹಸ್ತಾಂತರ ಕಗ್ಗಂಟಾಗಿದೆ ಎಂದು ಆರೋಪಿಸಲಾಗಿದೆ.

‘ಪುನರ್ವಸತಿ ಬಡಾವಣೆಯ ಮನೆಗಳ ಹಕ್ಕು ಪತ್ರ ನೀಡುವಂತೆ ಏಳು ವರ್ಷದಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುಸ್ಥಿತಿಗೆ ಕಾರಣ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸನಗೌಡ ಕಂಬಳಿ ಆರೋಪಿಸಿದ್ದಾರೆ.

ದಶಕ ಕಳೆದರು ಪುನರ್ವಸತಿ ಬಡಾವಣೆ ಅಭಿವೃದ್ಧಿಪಡಿಸಿ ನಿರ್ಮಾಣಗೊಂಡ ಮನೆಗಳನ್ನು ದುರಸ್ತಿಗೊಳಿಸಿ ಹಕ್ಕುಪತ್ರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಮನೆಗಳು ದುಸ್ಥಿತಿಗೆ ತಲುಪಿದ್ದು ದಾನಿಗಳ ಹಣ ವ್ಯರ್ಥವಾಗಿದೆ ಎಂದು ಸಂತ್ರಸ್ತರಾದ ದೇವಮ್ಮ, ಗದ್ದೆಮ್ಮ, ಶಂಕರಪ್ಪ, ಕರಿಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈಗಾಗಲೇ ಚಿಕ್ಕ ಉಪ್ಪೇರಿ ಪುನರ್ವಸತಿ ಬಡಾವಣೆ ಮನೆಗಳ ಹಸ್ತಾಂತರಕ್ಕೆ ಗ್ರಾಮ ಪಂಚಾಯಿತಿ ಸಿದ್ಧಪಡಿಸಿದ ಫಲಾನುಭವಿ ಪಟ್ಟಿ ಆಧರಿಸಿ ಹಕ್ಕುಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಚಾಮರಾಜ ಪಾಟೀಲ್‍ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.