ADVERTISEMENT

ಮಂತ್ರಾಲಯದಲ್ಲಿ ಅಪೂರ್ವ ಕ್ಷಣ: ಸಚಿವ ಅರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 13:37 IST
Last Updated 13 ಆಗಸ್ಟ್ 2022, 13:37 IST
ಅರಗ ಜ್ಞಾನೇಂದ್ರ
ಅರಗ ಜ್ಞಾನೇಂದ್ರ   

ರಾಯಚೂರು: ಮಂತ್ರಾಲಯಕ್ಕೆ ಬಂದಿದ್ದು ನನ್ನ ಜೀವನದ ಅಪೂರ್ವ ಕ್ಷಣವಾಗಿದ್ದು, 20 ವರ್ಷಗಳ ನಂತರ ಮತ್ತೆ ‌ಮಂತ್ರಾಲಯಕ್ಕೆ ಬಂದಿದ್ದೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಮಂತ್ರಾಲಯದಲ್ಲಿ ನಡೆಯುತ್ತಿರುವ ಶ್ರೀರಾಘವೇಂದ್ರ ಸ್ವಾಮಿಯವರ 351ನೇ ಮಧ್ಯಾರಾಧನೆ ದಿನದಂದು ರಾಯರ ವೃಂದಾವನ ದರ್ಶನ ಪಡೆದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಂತ್ರಾಲಯದಲ್ಲಿ ಈ ವರ್ಷ ತಿರುಪತಿ ಶ್ರೀನಿವಾಸ ದೇವರ ಶೇಷವಸ್ತ್ರ ನನ್ನ ತಲೆ ಇಟ್ಟು ಕೊಂಡು ಕೆಲ ಹೆಜ್ಜೆ ‌ನಡೆದೆ. ಇಡೀ ದೇಶಕ್ಕೆ- ರಾಜ್ಯಕ್ಕೆ ರಾಯರ ಆರ್ಶಿವಾದ ಇರಲಿ. ಹಿಂದೂ ಧರ್ಮ ಮತ್ತಷ್ಟು ಗಟ್ಟಿಯಾಗಲಿ‘ ಎಂದು ಹೇಳಿದರು..

ADVERTISEMENT

‘ನಾನು ‌ಗೃಹ ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಕೆಲಸ ಮಾಡಲು ರಾಯರು ‌ನನಗೆ ಶಕ್ತಿ ನೀಡಲಿ’ ಎಂದರು.

ದೇಶದಾದ್ಯಂತ ಆರಂಭಿಸಿರುವ ಹರ್‌ಘರ್‌ ತಿರಂಗಾ ಕುರಿತು ಮಾತನಾಡಿ, ತಿರಂಗಾ ಧ್ವಜವನ್ನು ಹಾರಿಸಿ ದೇಶಕ್ಕಾಗಿ ಹೋರಾಟ ಮಾಡಿದವರನ್ನು ನೆನಪಿಸುವ ಅಭಿಯಾನ ಇದಾಗಿದೆ. ಈ ಮೂಲಕ ನಮ್ಮಲ್ಲಿ ರಾಷ್ಟ್ರ ಭಕ್ತಿ ಆಹ್ವಾನ ಮಾಡಿಕೊಳ್ಳುವಂತದ್ದು, ಅದಕ್ಕಾಗಿಯೇ ಪ್ರಧಾನಿ ಮೋದಿಯವರು ಹರ್ ಘರ್ ಅಭಿಯಾನಕ್ಕೆ ಕರೆ ನೀಡಿದ್ದಾರೆ. ದೇಶದ ಸಾಮಾನ್ಯ ಮನುಷ್ಯ ಕೂಡಾ ಈ ದೇಶದ ಹೆಮ್ಮೆ ಪ್ರಜೆ ಎಂದು ಹೇಳಿಕೊಳ್ಳಬೇಕು, ಅಂದಾಗ ಮಾತ್ರ ಈ ಅಮೃತ ಮಹೋತ್ಸವಕ್ಕೆ ಶಕ್ತಿ ‌ಬರುತ್ತದೆ‘ ಎಂದು ತಿಳಿಸಿದರು.

ಮಂಗಳೂರಿನ್ನ ನಡೆದ ಗಲಾಟೆ ಪ್ರಕರಣ ಬಗ್ಗೆ ಮಾತನಾಡಿ, ಮೂರು ಜನರು ತಪ್ಪಿಸಿಕೊಂಡಿದ್ದರೂ ಅವರನ್ನ ಈಗ ನಮ್ಮ ಪೊಲೀಸರು ‌ಹೆಡೆಮುರಿ ಕಟ್ಟಿ ತಂದಿದ್ದಾರೆ. ಆರೋಪಿಗಳ ಹಿಂದೆ ಇರುವ ಮತಾಂಧರನ್ನು ಎನ್‌ಐಎ ತನಿಖೆ ನಡೆಸುತ್ತಿದೆ. ಬಹಳ ಸಂತೋಷ ಆಗಿದೆ ಮಂಗಳೂರು ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾವುದೇ ಕುರುಹುಗಳು ಇಲ್ಲದೆಯೂ ಪೊಲೀಸರು ತನಿಖೆ ‌ನಡೆಸಿ ಆರೋಪಿಗಳನ್ನ ಹಿಡಿದು ತಂದಿದ್ದಾರೆ. ನಮ್ಮ ಎಲ್ಲಾ ಆತ‌ಂಕವೂ ದೂರು ಮಾಡಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಚಾಮರಾಜಪೇಟೆ ಮೈದಾನ ಗಲಾಟೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ,

ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಅಂತ ಆಗಿದೆ. ಕಂದಾಯ ಇಲಾಖೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಮ್ಮ ಪೊಲೀಸರು ಬದ್ಧರಾಗಿರುತ್ತಾರೆ. ಶಾಂತಿ, ಸುವ್ಯವಸ್ಥೆ ಕಾಪಾಡುವ ವ್ಯವಸ್ಥೆ ಮಾಡುತ್ತಾರೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.