ADVERTISEMENT

ಬೇಡಿಕೆಗಳ ಈಡೇರಿಕೆಗೆ ಆಗ್ರಹ: ವಸತಿ ನಿಲಯಕ್ಕೆ ಬೀಗ ಹಾಕಿ ವಿದ್ಯಾರ್ಥಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 13:56 IST
Last Updated 30 ನವೆಂಬರ್ 2024, 13:56 IST
ಹಟ್ಟಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು
ಹಟ್ಟಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು   

ಹಟ್ಟಿ ಚಿನ್ನದ ಗಣಿ: ವಿವಿಧ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್‌ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಬೀಗ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.

‘ವಸತಿ ನಿಲಯದಲ್ಲಿ ಸ್ನಾನಕ್ಕೆ ಸಮರ್ಪಕ ನೀರು ಸಿಗುತ್ತಿಲ್ಲ. ಹಾಸ್ಟೆಲ್‌ನಲ್ಲಿ ಶೌಚಾಲಯವಿದೆ, ಆದರೆ ನೀರಿಲ್ಲದೆ ಅದಕ್ಕೆ ಬೀಗ ಹಾಕಲಾಗಿದೆ. ಸಮಸ್ಯೆ ಬಗ್ಗೆ ಹಾಸ್ಟೆಲ್‌ ವಾರ್ಡನ್‌ ಅವರಿಗೆ ತಿಳಿಸಿದರೂ, ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಹಾಸ್ಟೆಲ್‌ ಕಡೆಗೆ ಬರುವುದೇ ಅಪರೂಪವಾಗಿದ್ದು, ವಿದ್ಯಾರ್ಥಿಗಳ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ’ ಎಂದು ಪ್ರತಿಭಟನನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ವಸತಿ ನಿಲಯದಲ್ಲಿ ಬಾಬಣ್ಣ ಎಂಬುವವರಿದ್ದಾರೆ. ಅವರು ವಿದ್ಯಾರ್ಥಿಗಳಿಗೆ ಹೊಡೆಯುವುದು, ಗದರಿಸುವುದು ಮಾಡುತ್ತಾರೆ. ಅವರನ್ನು ಕೂಡಲೇ ಕೆಲಸದಿಂದ ತೆಗೆದುಹಾಕಬೇಕು. ವಿದ್ಯಾರ್ಥಿಗಳ  ಜೀವಕ್ಕೆ ಹಾನಿಯಾದರೆ ಅದಕ್ಕೆ ವಸತಿ ನಿಲಯದ ಅಧಿಕಾರಿಗಳು ಹಾಗೂ ಬಾಬಣ್ಣ ಅವರೇ ನೇರ ಹೊಣೆ’ ಎಂದರು.

ADVERTISEMENT

‘ವಸತಿ ನಿಲಯದಲ್ಲಿ ಕೂರಲು ಕುರ್ಚಿಯಿಲ್ಲ. ಕ್ರೀಡಾ ಸಾಮಗ್ರಿ, ದಿನಪತ್ರಿಕೆಗಳೂ ಇಲ್ಲ. ಗ್ರಂಥಾಲಯದ ವ್ಯವಸ್ಧೆ ಮಾಡಿ ಕೊಡಿ ಎಂದರೆ ಅದನ್ನೂ ಮಾಡಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಆಗ್ರಹಿಸಿದರು.

‘40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದು, ಬೆಳಿಗ್ಗೆಯೇ ಬೀಗ ಹಾಕಿದ್ದರಿಂದ ಅಡುಗೆ ಮಾಡಲೂ ಸಾಧ್ಯವಾಗಿಲ್ಲ’ ಎಂದು ಮೂಲಗಳು ಹೇಳಿವೆ.

- ಬೇಡಿಕೆ ಈಡೇರಿಕೆಗೆ ಮಕ್ಕಳ ಪಟ್ಟು
‘ಸಂಬಂಧಪಟ್ಟ ಅಧಿಕಾರಿಗಳು ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ಗ್ರಂಥಾಲಯ ಕ್ರೀಡಾ ಸಾಮಗ್ರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆಗಳು ಈಡೇರಿಸುವರೆಗೂ ಹೋರಾಟ ನಿಲ್ಲದು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ವಸತಿ‌ನಿಲಯದ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.