ADVERTISEMENT

‘ಎಚ್‌ಪಿವಿ ಲಸಿಕೆಯ ತಿಳಿವಳಿಕೆ ನೀಡಿ’

ತರಬೇತಿ ಕಾರ್ಯಾಗಾರದಲ್ಲಿ ಡಾ.ಸುರೇಂದ್ರ ಬಾಬು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:00 IST
Last Updated 10 ಜನವರಿ 2026, 6:00 IST
ರಾಯಚೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ನಡೆದ ಎಚ್‌ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್. ಚಾಲನೆ ನೀಡಿದರು
ರಾಯಚೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ನಡೆದ ಎಚ್‌ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್. ಚಾಲನೆ ನೀಡಿದರು   

ರಾಯಚೂರು: ‘ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಜ್ಯ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದ್ದು, 9 ರಿಂದ 14 ವರ್ಷದೊಳಗಿನ ಶಾಲಾ ಹೆಣ್ಣು ಮಕ್ಕಳಿಗೆ ಜಿಲ್ಲೆಯಲ್ಲಿ ಉಚಿತ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಲಸಿಕೆ ಹಾಕುವ ಕುರಿತು ಇಂದಿನಿಂದಲೇ ವ್ಯಾಪಕ ಮಾಹಿತಿಯನ್ನು ಶಾಲಾಮಟ್ಟದಲ್ಲಿ ನೀಡಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೃಷ್ಣಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಚ್‌ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾಮಾನ್ಯವಾಗಿ ವೈಯಕ್ತಿಕ ಶುಚಿತ್ವ, ಜನನಾಂಗಗಳಲ್ಲಿ ತೊಂದರೆ, ಹುಣ್ಣು ಹಾಗೂ ಲೈಂಗಿಕ ಸಂಪರ್ಕದಿಂದ ಹರಡುವ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್‌ಪಿವಿ) ಸೋಂಕು ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆಗಳಾಗಿ ಕ್ಯಾನ್ಸರ್‌ ಆಗಿ ಬದಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್. ಮಾತನಾಡಿ, ‘ಮುಖ್ಯವಾಗಿ ಧೂಮಪಾನ, ದುರ್ಬಲ ರೋಗ ನಿರೋಧಕ ಶಕ್ತಿ, ಜನನಾಂಗದ ಸೋಂಕು, ಬಹು ಲೈಂಗಿಕ ಪಾಲುದಾರಿಕೆಯು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಬಹುದಾಗಿದೆ’ ಎಂದರು.

‘ಮಹಿಳೆಯ ಆರೋಗ್ಯಕ್ಕೆ ಮಾರಕವಾಗುವುದನ್ನು ತಡೆಯಲು ಎಚ್‌ಪಿವಿ ಲಸಿಕೆ ಮಹತ್ವಪೂರ್ಣವಾಗಿದೆ. ಮಾರ್ಗಸೂಚಿಯಡಿ 9 ರಿಂದ 14 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ವಯಸ್ಸಿಗನುಗುಣವಾಗಿ ಉಚಿತವಾಗಿ ಚುಚ್ಚುಮದ್ದು ರೂಪದಲ್ಲಿ ನೀಡುವುದನ್ನು ವ್ಯಾಪಕವಾಗಿ ಶಾಲಾಮಟ್ಟದಲ್ಲಿ ಹಾಗೂ ಪಾಲಕರಿಗೂ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ ಕೆ, ಜಿಲ್ಲಾ ಕಾರ್ಯಪಡೆ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಪ್ರಜ್ವಲಕುಮಾರ, ಮನೋವೈದ್ಯ ಡಾ.ಮನೋಹರ ಪತ್ತಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆಪ್ತ ಸಹಾಯಕ ಲೇಪಾಕ್ಷಯ್ಯ, ಐಎಫ್‌ವಿ ಕೊಪ್ರೇಶ್, ರಾಘವೇಂದ್ರ, ವೈದ್ಯಾಧಿಕಾರಿಗಳು, ತಾಲ್ಲೂಕು ಮೇಲ್ವಿಚಾರಕರು, ಬಿಪಿಎಂ ಹಾಗೂ ಆಶಾ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.