ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ಆಯೋಜಿಸಿರುವ ಕೃಷಿ ಮೇಳದ ಎರಡನೇ ದಿನ ಭಾನುವಾರ ಪ್ರದರ್ಶನ ವೀಕ್ಷಣೆಗೆ ಜನ ಸಾಗರವೇ ಹರಿದು ಬಂದಿತು.
ಜಿಲ್ಲೆಯ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಜನ ಖಾಸಗಿ ವಾಹನಗಳಲ್ಲಿ ಬಂದರು. ಕೆಲ ಪ್ರೌಢಶಾಲೆಗಳ ಶಿಕ್ಷಕರು ಗೂಡ್ಸ್ ವಾಹನದಲ್ಲಿ ಮಕ್ಕಳನ್ನು ಕರೆ ತಂದು ಮೇಳದ ವೀಕ್ಷಣೆ ಮಾಡಿಸಿದರು.
ಮೇಳದಲ್ಲಿನ 224 ಮಳಿಗೆಗಳಲ್ಲೂ ಜನ ತುಂಬಿಕೊಂಡಿದ್ದರು. ಸಂಜೆ ಜನ ದಟ್ಟಣೆ ಹೆಜ್ಜಾಗಿ ಸಂಚಾರ ನಿಯಂತ್ರಿಸುವುದು ಪೊಲೀಸರು ಹಾಗೂ ವಿಶ್ವವಿದ್ಯಾಲಯದ ಸುರಕ್ಷಾ ಸಿಬ್ಬಂದಿಗೆ ಕಷ್ಟವಾಯಿತು. ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜನದಟ್ಟಣೆ ನಿಯಂತ್ರಿಸಲು ನೆರವಾದರು.
ದೂರದ ಊರುಗಳಿಂದ ಬಂದಿದ್ದ ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಚಾರಿ ಶೌಚಾಲಯಗಳನ್ನು ಮೇಳದ ಸಮೀಪ ಇಡಲಾಗಿತ್ತು. ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಮೇಳದ ಯಶಸ್ವಿಗೆ ಶ್ರಮಿಸಿದರು. ಸರ್ಕಾರದ ಅಭಿವೃದ್ಧಿ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ರೈತರು ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.