ADVERTISEMENT

’ಅಕ್ರಮ ಮರಳು: ಅಧಿಕಾರಿಗಳನ್ನು ಬಂಧಿಸದ ಪೊಲೀಸರು‘

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 14:48 IST
Last Updated 30 ಮಾರ್ಚ್ 2022, 14:48 IST

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿಯಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ಮರಳು ಸಾಗಣೆಗೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಎಂಟು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರೂ ಇನ್ನೂ ಬಂಧಿಸಿಲ್ಲ ಎಂದುಸಾಮಾಜಿಕ ಕಾರ್ಯಕರ್ತ ಹನುಮಂತಪ್ಪ ಭಂಗಿ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ದಂಡ ಸಂಹಿತೆಯಡಿ ಜಾಮೀನು ರಹಿತ ಸೆಕ್ಷೆನ್‌ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ, ನಿಯಮಾನುಸಾರ ಬಂಧನ ಮಾಡಿರುವುದಿಲ್ಲ.ಅಕ್ರಮ ಮರಳು ಗಣಿಗಾರಿಕೆ ತಡೆಗೆ ಜಿಲ್ಲಾಡಳಿತ ಕೈಚೆಲ್ಲಿದೆ. ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ತಿಳಿಸಿದರು.

ಅಕ್ರಮದ ಹಿಂದೆ ಶಾಸಕ ಶಿವನಗೌಡ ನಾಯಕ ಅವರ ಬೆಂಬಲವಿದೆ. ಹೀಗಾಗಿ ಅಧಿಕಾರಿಗಳು ಮತ್ತು ಪೊಲೀಸರು ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ವಿನಾ ಕೋರ್ಟ್‌ ಆದೇಶಕ್ಕೂ ಮನ್ನಣೆ ಕೊಡುತ್ತಿಲ್ಲ.ಕೃಷ್ಣಾ ನದಿಯಿಂದ ನಿಯಮ ಬಾಹಿರವಾಗಿ 5 ರಿಂದ 6 ಹಿಟಾಚಿಗಳ ಮೂಲಕ ಅಕ್ರಮವಾಗಿ ಮರಳು ಸಾಗಾಣೆ ಮಾಡಲಾಗುತ್ತಿದೆ. ಈ ಬಗ್ಗೆ ಪೋಲಿಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ದಾಖಲೆಗಳ ಸಮೇತ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ADVERTISEMENT

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣೆ ಮೇಲೆ ನಿಗಾ ವಹಿಸಿ ಕ್ರಮ ವಹಿಸದಿದ್ದರೆ ಕಾನೂನು ಹೋರಾಟ ಮುಂದುವರೆಸುತ್ತೇನೆ. ನನಗೂ ಜೀವ ಬೆದರಿಕೆ ಇದ್ದರೂ, ಕಣ್ತಪ್ಪಿಸಿಕೊಂಡು ಸಂಚರಿಸುತ್ತಿದ್ದೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.