ADVERTISEMENT

ಮರಳು ಅಕ್ರಮ ಸಾಗಣೆ: ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:40 IST
Last Updated 10 ಮಾರ್ಚ್ 2025, 14:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಸೋಮವಾರ ಟ್ರ್ಯಾಕ್ಟರ್ ಮೂಲಕ ಮರಳು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.

‘ದೇವರಾಜ ಎಂಬಾತ ಟ್ರ್ಯಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ಪೊಲೀಸ್ ಕಾನ್‌ಸ್ಟೆಬಲ್ ಲಕ್ಷ್ಮಣ ಅವರು ತಡೆದು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ‘ಇಲಾಖೆಗಳಿಗೆ ಮಾಮೂಲು ತಲುಪಿಸಲಾಗಿದೆ. ಟಿಪ್ಪರ್‌ನಲ್ಲಿ ಸಾಗಿಸಿದರೆ ಮೌನವಾಗಿರುತ್ತೀರಿ, ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದರೆ ಏಕೆ ಬರ್ತೀರಿ’ ಎಂದು ದೇವರಾಜ ಕೂಗಾಡಿದ್ದಾನೆ. ಬಳಿಕ ಆವೇಶದಲ್ಲಿ ಕಾನ್‌ಸ್ಟೆಬಲ್ ಲಕ್ಷ್ಮಣ ಅವರ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಗಾಯಗೊಂಡ ಕಾನ್‌ಸ್ಟೆಬಲ್ ಲಕ್ಷ್ಮಣ ಅವರು ಮಾನ್ವಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೇವರಾಜನನ್ನು ಪೊಲೀಸರು ಬಂಧಿಸಿದ್ದಾರೆ.

‘ಪೊಲೀಸ್ ಹಿರಿಯ ಅಧಿಕಾರಿಗಳು ಮರಳು ಅಕ್ರಮ ದಂಧೆಕೋರರೊಂದಿಗೆ ಕೈಜೋಡಿಸಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಅಕ್ರಮಗಳ ಬಗ್ಗೆ ಮಾಹಿತಿ ಕೊಡಲು ಫೋನ್‌ ಕರೆ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ಅಧಿಕಾರಿಗಳ ನಡತೆಯಿಂದ ಕಾನ್‌ಸ್ಟೆಬಲ್‌ಗಳು ಬಲಿಪಶು ಆಗುತ್ತಿದ್ದಾರೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.