ADVERTISEMENT

ಮಾನ್ವಿ: ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳ ಸ್ಥಳಾಂತರಕ್ಕೆ ಒತ್ತಾಯ

ಮಾನ್ವಿ: ತಾಲ್ಲೂಕು ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ: ಹಳೆಯ ಕಟ್ಟಡ ಖಾಲಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 6:10 IST
Last Updated 29 ಅಕ್ಟೋಬರ್ 2024, 6:10 IST
ಮಾನ್ವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಹಳೆ ಕಟ್ಟಡ
ಮಾನ್ವಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಹಳೆ ಕಟ್ಟಡ   

ಮಾನ್ವಿ: ‘ಪಟ್ಟಣದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಸರ್ಕಾರಿ ಕಚೇರಿಗಳನ್ನು ತಾಲ್ಲೂಕು ಪಂಚಾಯಿತಿಯ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಬೇಕು’ ಎಂದು ಸಂಘ ಸಂಸ್ಥೆಗಳು ಒತ್ತಾಯಿಸಿವೆ.

ಶಾಸಕರ ಭವನದ ಮುಂಭಾಗದಲ್ಲಿ ನಿರ್ಮಿಸಿರುವ ತಾಲ್ಲೂಕು ಪಂಚಾಯಿತಿ ಕಚೇರಿಯ ನೂತನ ಕಟ್ಟಡವನ್ನು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು.

‘ತಾಲ್ಲೂಕು ಪಂಚಾಯಿತಿ ಆಡಳಿತ ಈಗಾಗಲೇ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಇದರಿಂದ ಖಾಲಿಯಾಗಿರುವ ತಾಲ್ಲೂಕು ಪಂಚಾಯಿತಿಯ ಹಳೇ ಕಟ್ಟಡಕ್ಕೆ ಇದುವರೆಗೂ ಖಾಸಗಿ ಬಾಡಿಗೆ ಕಟ್ಟಡಗಳಲ್ಲಿರುವ ವಿವಿಧ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸಬೇಕು’ ಎಂಬ ಒತ್ತಾಯ ಕೇಳಿ ಬಂದಿದೆ.

ADVERTISEMENT

ಈ ಕುರಿತು ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಶೀನಾಥ ಕುರ್ಡಿ ಮತ್ತು ಪದಾಧಿಕಾರಿಗಳು ಈಚೆಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ತಾ.ಪಂ ಹಳೇ ಕಚೇರಿ ಕಟ್ಟಡಕ್ಕೆ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರಿಸಿ ಸರ್ಕಾರದ ಬೊಕ್ಕಸಕ್ಕೆ ಹೊರೆ ತಪ್ಪಿಸಬೇಕು.
ಕಾಶೀನಾಥ ಕುರ್ಡಿ, ಜಿಲ್ಲಾಧ್ಯಕ್ಷ, ಕರ್ನಾಟಕ ದಲಿತ ರಕ್ಷಣಾ ವೇದಿಕೆ

‌ಬಾಡಿಗೆ ಕಟ್ಟಡವೇ ಗತಿ: ಪಟ್ಟಣದಲ್ಲಿ ಆಹಾರ ನಿರೀಕ್ಷಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಬಿಸಿಎಂ, ಭೂ ದಾಖಲೆಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ರೇಷ್ಮೆ, ಕಾರ್ಮಿಕ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಹಕಾರ ಸಂಘಗಳ ಲೆಕ್ಕಪರಿಶೋಧಕರ ಕಚೇರಿ, ಅಬಕಾರಿ ಇಲಾಖೆ ಕಚೇರಿಗಳು ಸೇರಿದಂತೆ ಒಟ್ಟು 11 ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಇಲ್ಲ. ದಶಕಗಳಿಂದ ಅವು ಬಾಡಿಗೆ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳ ಬಾಡಿಗೆ ಪಾವತಿಗೆ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಕೆಲವು ಕಚೇರಿಗಳನ್ನಾದರೂ ಸ್ಥಳಾಂತರಿಸಿದರೆ ಅಷ್ಟರ ಮಟ್ಟಿಗೆ ಸರ್ಕಾರದ ಬೊಕ್ಕಸದ ಹೊರೆ ಕಡಿಮೆಯಾಗುತ್ತದೆ ಎಂಬುದು ಲೆಕ್ಕಚಾರ.

‘ಪಟ್ಟಣದ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಇನ್ನೂ ಚಾಲನೆ ಸಿಕ್ಕಿಲ್ಲ. ಹಳೆಯ ತಾಲ್ಲೂಕು ಪಂಚಾಯಿತಿ ಕಚೇರಿ ಕಟ್ಟಡವು ಮೂರ್ನಾಲ್ಕು ಇಲಾಖೆಗಳ ಕಚೇರಿಗಳಿಗೆ ಅಗತ್ಯ ಸಂಖ್ಯೆಯ ಕೊಠಡಿಗಳನ್ನು ಹೊಂದಿದೆ. ಈ ಕಟ್ಟಡಕ್ಕೆ ಬಾಡಿಗೆ ಕಟ್ಟಡಗಳಲ್ಲಿರುವ ಆಯ್ದ ಕಚೇರಿಗಳನ್ನು ಸ್ಥಳಾಂತರಿಸುವುದು ಸೂಕ್ತ. ಪಟ್ಟಣದ ಮಧ್ಯ ಭಾಗದಲ್ಲಿರುವ ಕಾರಣ ಕಚೇರಿ ಕೆಲಸಗಳಿಗೆ ಬರುವ ಗ್ರಾಮೀಣ ಜನರಿಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಗತ್ಯ ತೀರ್ಮಾನ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.