ADVERTISEMENT

ಒಳಮೀಸಲಾತಿ ಭಾವನಾತ್ಮಕ ವಿಷಯವಲ್ಲ: ಅಪ್ಪಗೆರೆ ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 11:43 IST
Last Updated 29 ನವೆಂಬರ್ 2020, 11:43 IST
ರಾಯಚೂರಿನ ಜೆ.ಸಿ.ಭವನದ ಎಂ.ಜಯಣ್ಣ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ್‌ ಮಾತನಾಡಿದರು
ರಾಯಚೂರಿನ ಜೆ.ಸಿ.ಭವನದ ಎಂ.ಜಯಣ್ಣ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ್‌ ಮಾತನಾಡಿದರು   

ರಾಯಚೂರು: ಒಳಮೀಸಲಾತಿ ಭಾವನಾತ್ಮಕ ವಿಷಯವಲ್ಲ. ಅದನ್ನು ಯಾವುದೇ ಒಂದು ಜಾತಿ ವಿರೋಧಿಸುವುದಕ್ಕೆ ಚರ್ಚೆಯ ವಿಷಯ ಮಾಡಿಕೊಳ್ಳಬಾರದು ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡಾ.ಅಪ್ಪಗೆರೆ ಸೋಮಶೇಖರ್‌ ಅಭಿಪ್ರಾಯಪಟ್ಟರು.

ನಗರದ ಜೆ.ಸಿ.ಭವನದ ಎಂ.ಜಯಣ್ಣ ವೇದಿಕೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ‘ಒಳಮೀಸಲಾತಿ ಅಸ್ತ್ರ- ದಲಿತರ ಮುಂದಿರುವ ಸವಾಲು’ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದರು.

ಒಳಮೀಸಲಾತಿ ಎಂಬುದು ಹೋರಾಟಗಾರರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ. ಈಗ ಅದನ್ನು ರಾಜಕೀಯ ಅಸ್ತ್ರವಾಗಿದ್ದು ಬಳಕೆ ಮಾಡಲಾಗುತ್ತಿದೆ. ಅದನ್ನು ಕಾನೂನಾತ್ಮಕವಾಗಿ, ವೈಜ್ಞಾನಿಕವಾಗಿ ವಿಶ್ಲೇಷಿಸುವ ಕೆಲಸ ಆಗಬೇಕು. ಭಾವನಾತ್ಮಕವಾಗಿ ವಿಶ್ಲೇಷಿಸುತ್ತಿರುವುದು ವಿಷಾದಕರ ಎಂದರು.

ADVERTISEMENT

ಸಾಮಾಜಿಕ ನ್ಯಾಯ ಅನುಷ್ಠಾನಕ್ಕಾಗಿ ಡಾ.ಬಿ.ಆರ್.‌ಅಂಬೇಡ್ಕರ್ ಅವರು ಮೀಸಲಾತಿ ಜಾರಿಗೆ ತಂದಿದ್ದಾರೆ. ಸಂವಿಧಾನ ಜಾರಿಯಾಗಿ 71 ವರ್ಷಗಳಲ್ಲಿ ನಿಜವಾಗಿಯೂ ಮೀಸಲಾತಿ ಜಾರಿಯಾಗಿದೆಯೇ ಎಂಬುದನ್ನು ವಿಮರ್ಶಿಸಬೇಕು. ಮೀಸಲಾತಿ ತಲುಪಿಸುವ ಹಿನ್ನೆಲೆಯಲ್ಲಿ ಒಳಮೀಸಲಾತಿ ಬಂದಿದೆ. ನ್ಯಾ. ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ವರದಿ ಬಹಿರಂಗಪಡಿಸಲು ಮೊದಲು ಸರ್ಕಾರಕ್ಕೆ ಒತ್ತಾಯಿಸಬೇಕಾಗಿದೆ ಎಂದು ತಿಳಿಸಿದರು.

ಜಾತಿಯನ್ನು ವಿರೋಧಿಸುವ ಕೆಲಸ ಆಗಬಾರದು. ಎಲ್ಲ ಜನರ ಹಿತದೃಷ್ಟಿಯಿಂದ ಅಂಬೇಡ್ಕರ್‌ ಅವರು ಸಂವಿಧಾನ ಬರೆದಿದ್ದಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಾದಿಗ ದಂಡೋರ ಸಮಿತಿಯ ನರಸಪ್ಪ ದಂಡೋರ ಅವರು ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಆನಂತರ ಮಾತನಾಡುತ್ತಾ, ‘ದಲಿತರಲ್ಲಿ ಯಾವುದೇ ಹೊಸ ಸಂಘಟನೆಗಳು ಸ್ಥಾಪನೆಯಾಗಿದ್ದರೂ ಎಲ್ಲರ ಗುರಿ ಒಂದೇ ಆಗಿದೆ. ಇಡೀ ಸಮುದಾಯದ ಒಳಿತಿಗಾಗಿ ಸಂಘಟನೆ, ಹೋರಾಟ ಮಾಡಿಕೊಂಡು ಬಂದಿದ್ದೇವೆ. ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆ ಬಂದರೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ದೌರ್ಜನ್ಯ, ದಬ್ಬಾಳಿಕೆ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ’ ಎಂದರು.

ಹನುಮಂತಪ್ಪ ವೆಂಕಟಾಪುರ ಪ್ರಾಸ್ತಾವಿಕ ಮಾತನಾಡಿ, ಒಳಮೀಸಲಾತಿ ಪರವಾಗಿರುವವರು ರಾಜ್ಯದಲ್ಲಿ ಏಕಕಾಲಕ್ಕೆ ಹೋರಾಟ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಮೀಸಲಾತಿಯನ್ನೂ ಕಳೆದುಕೊಳ್ಳುವ ಭೀತಿ ಇದೆ.‌ ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಮಿತಿ ಜಿಲ್ಲಾ ಸಂಚಾಲಕ ಹಣಮಂತಪ್ಪ ಕಾಕರಗಲ್‌ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಸತ್ಯ ಭದ್ರಾವತಿ, ವಿಜಯ ನರಸಿಂಹ, ಮಲ್ಲೇಶ ಸಜ್ಜನ, ಎಸ್‌.ವಿಘ್ನೇಶ, ಕರುಣಾಕರ ಕಟ್ಟಿಮನಿ, ಎನ್‌.ಲಕ್ಷ್ಮೀರೆಡ್ಡಿ, ದಲಿತ ಕಲಾ ಮಂಡಳಿ ರಾಜ್ಯಾಧ್ಯಕ್ಷ ಹೈದರ್‌ ಅಲಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.