ADVERTISEMENT

ಕೃಷಿ ಇಲಾಖೆಯಿಂದ ಸಿರಿಧಾನ್ಯ, ಜಲಾನಯನ ಮಾಹಿತಿ

ಮಳೆನೀರು ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನ ತಿಳಿಸುವ ಮಾದರಿ

ನಾಗರಾಜ ಚಿನಗುಂಡಿ
Published 11 ಜನವರಿ 2023, 23:00 IST
Last Updated 11 ಜನವರಿ 2023, 23:00 IST
ರಾಯಚೂರಿನಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಕೃಷಿ ಇಲಾಖೆಯಿಂದ ಸಿದ್ಧಪಡಿಸಿರುವ ಸಿರಿಧಾನ್ಯ ಮತ್ತು ಜಲಾನಯನ ಮಾದರಿಯನ್ನು ಜನರು ಬುಧವಾರ ವೀಕ್ಷಿಸುವುದು ಕಂಡುಬಂತು.
ರಾಯಚೂರಿನಲ್ಲಿ ನಡೆಯುತ್ತಿರುವ ಕೃಷಿಮೇಳದಲ್ಲಿ ಕೃಷಿ ಇಲಾಖೆಯಿಂದ ಸಿದ್ಧಪಡಿಸಿರುವ ಸಿರಿಧಾನ್ಯ ಮತ್ತು ಜಲಾನಯನ ಮಾದರಿಯನ್ನು ಜನರು ಬುಧವಾರ ವೀಕ್ಷಿಸುವುದು ಕಂಡುಬಂತು.   

ರಾಯಚೂರು: ಇಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಕೃಷಿಮೇಳದಲ್ಲಿ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸುವ ಮತ್ತು ಜಲಾನಯನ ಅಭಿವೃದ್ಧಿ ಮೂಲಕ ಬರಗಾಲ ತಡೆಯುವಿಕೆಗೆ ಸಂಬಂಧಿಸಿ ಮಾದರಿಯು ರೈತಾಪಿ ವರ್ಗದವರ ಗಮನ ಸೆಳೆಯುತ್ತಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕೃಷಿ ಇಲಾಖೆಯಿಂದ ಸಿದ್ಧಪಡಿಸಿರುವ ಈ ಮಾದರಿಯನ್ನು ರೈತರು ಮುಗಿಬಿದ್ದು ವೀಕ್ಷಿಸುವುದು ಬುಧವಾರ ಕಂಡುಬಂತು. ಮಾದರಿಯಲ್ಲಿದ್ದ ನಿರ್ಮಾಣದ ಕುರಿತು ಪರಸ್ಪರ ಚರ್ಚಿಸುವುದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದು ಸಾಮಾನ್ಯವಾಗಿತ್ತು.

‘ವಿಶ್ವಸಂಸ್ಥೆಯು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದೆ. ಸಿರಿಧಾನ್ಯಗಳನ್ನು ಬೆಳೆಯುವುದು, ಬಳಸುವುದಕ್ಕೆ ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಮಾದರಿ ನಿರ್ಮಿಸಲಾಗಿದೆ‘ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್‌.ದೇವಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ರಾಯಚೂರು ಜಿಲ್ಲೆಯಲ್ಲಿ ಈ ವರ್ಷ 500 ಹೆಕ್ಟೇರ್‌ನಲ್ಲಿ ಸಿರಿಧಾನ್ಯಗಳನ್ನು ರೈತರು ಬೆಳೆದಿದ್ದಾರೆ. ಮುಖ್ಯವಾಗಿ ಲಿಂಗಸುಗೂರು ಮತ್ತು ಸಿರವಾರ ತಾಲ್ಲೂಕುಗಳಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ನವಣೆ ಹೆಚ್ಚಿನ ಪ್ರಮಾಣದಲ್ಲಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ ₹6 ಸಾವಿರ ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತಿದೆ.

ಜಲಾನಯನ: ಮಳೆನೀರನ್ನು ಸಂರಕ್ಷಣೆ ಮಾಡಿಕೊಂಡು ಸುಸ್ಥಿರ ಕೃಷಿ ಮಾಡುವ ವಿಧಾನವನ್ನು ಕಲಾಕೃತಿ ರೂಪದಲ್ಲಿ ನಿರ್ಮಿಸಿರುವುದು ವಿಶೇಷವಾಗಿದೆ. ಸಾರ್ವಜನಿಕರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಗುಡ್ಡಗಾಡುಗಳಿಂದ ಮಳೆ ನೀರು ಕೆಳಭಾಗಕ್ಕೆ ಹರಿಯುವಾಗ ಮಣ್ಣು ಸಂರಕ್ಷಣೆ ಹೇಗೆ ಮಾಡಿಕೊಳ್ಳುವುದು, ಮಳೆ ನೀರು ಸಂಗ್ರಹಿಸುವ ವಿಧಾನಗಳನ್ನು ಈ ಮಾದರಿ ಮೂಲಕ ಮನವರಿಕೆ ಆಗುವಂತೆ ಮಾಡಲಾಗಿದೆ.

ಚೆಕ್‌ಡ್ಯಾಂ ನಿರ್ಮಾಣ ಮಾಡುವುದು, ನಾಲಾ ಬದುಗಳನ್ನು ನಿರ್ಮಿಸುವುದು, ಕೃಷಿ ಹೊಂಡ ಮಾಡುವುದರಿಂದ ನೀರನ್ನು ಸಂರಕ್ಷಿಸಬಹುದು ಎನ್ನುವುದನ್ನು ತೋರಿಸಲಾಗಿದೆ. ಮಳೆಯಾಶ್ರಿತ ಪ್ರದೇಶದ ರೈತರ ಆದಾಯವನ್ನು ಹೆಚ್ಚಿಸಲು, ಜಲಾನಯನ ಪ್ರದೇಶಗಳಲ್ಲಿ ಸ್ವಾಭಾವಿಕ ಸಂಪನ್ಮೂಲಗಳನ್ನು ನಿರ್ವಹಿಸುವ ವಿಧಾನಗಳನ್ನು ಇಲ್ಲಿ ಮನಮುಟ್ಟುವಂತೆ ಮಾಡಲಾಗಿದೆ.

ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವುದು ಮತ್ತು ಈ ಮೂಲಕ ಕೃಷಿ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು. ಬರಡು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸುವುದು. ಒಟ್ಟಾರೆ ಮಳೆನೀರನ್ನು ಸಮರ್ಪಕವಾಗಿ ಬಳಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುವುದು ಮತ್ತು ಭೂಮಿಯನ್ನು ದೀರ್ಘಕಾಲ ಕಾಪಾಡಿಕೊಳ್ಳುವ ಅಂಶಗಳನ್ನು ಈ ಜಲಾನಯನ ಮಾದರಿಯಲ್ಲಿ ಬಿಂಬಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.