ADVERTISEMENT

‘ಮಾವಿನ ಗಿಡದ ಸವರಿಕೆಗೆ ಮಹತ್ವ ಕೊಡಿ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 12:23 IST
Last Updated 31 ಜುಲೈ 2018, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಚೂರು: ಜಿಲ್ಲೆಯಲ್ಲಿ ಸಾಕಷ್ಟು ಜನ ಮಾವು ಬೆಳೆಗಾರರು ಇದ್ದು, ಈಗಾಗಲೇ ಮಾವಿನ ಋತು ಮುಗಿದಿರುವುದರಿಂದ ತೋಟದ ನಿರ್ವಹಣೆ ಮತ್ತು ಮಾವಿನ ಗಿಡದ ಸವರಿಕೆಗೆ ರೈತರು ಮಹತ್ವ ನೀಡಬೇಕು ಎಂದು ಪ್ರಭಾರಿ ತೋಟಗಾರಿಕೆ ಉಪ ನಿರ್ದೇಶಕ ಮಹೇಶ ಸಲಹೆ ನೀಡಿದ್ದಾರೆ.

ಪ್ರತಿ ವರ್ಷ ಮಾವಿನ ಕಟಾವು ಮುಗಿದ ನಂತರ ಗಿಡಗಳ ಅಪ್ರಯೋಜಕ ರಂಬೆ, ಕೊಂಬೆಗಳನ್ನು ಕತ್ತರಿಸಿ ಗಿಡಗಳು ಚೆನ್ನಾಗಿ ಗಾಳಿ ಆಡುವ ಹಾಗೆ ಹಾಗೂ ಸೂರ್ಯನ ಬೆಳೆಕು ಯತೇಚ್ಛವಾಗಿ ಬಿಳುವಂತೆ ಮಾಡುವುದರಿಂದ ಮುಂದಿನ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಸಾಮಾನ್ಯವಾಗಿ ಮಾವಿನ ಫಸಲು ಪ್ರತಿವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಚಾಟನಿಯನ್ನು ಮಾಡಬೇಕು. ಇದರಿಂದ ಗಿಡದ ಒಣಗಿದ ಮತ್ತು ರೋಗ ಗ್ರಸ್ತ ಭಾಗಗಳನ್ನು ಕತ್ತರಿಸುವುದರಿಂದ ಗಿಡವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಚಾಟನಿಯನ್ನು ಜುಲೈ ತಿಂಗಳ ಕೊನೆಯ ಹಾಗೂ ಅಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಮಾಡಿ ಮುಗಿಸುವುದು ಉತ್ತಮ.

ಈ ರೀತಿ ವೈಜ್ಞಾನಿಕ ಚಾಟನಿ ಪದ್ಧತಿ ಮತ್ತು ತೋಟದ ನೈರ್ಮಲ್ಯವನ್ನು ಕಾಪಾಡುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆದು ಹೆಚ್ಚಿನ ಆದಾಯ ಮಾಡಿಕೊಳ್ಳಬಹುದು. ಚಾಟನಿ ಮುಗಿದ ನಂತರ ಗಿಡದ ಸುತ್ತಲು ಮಣ್ಣನ್ನು ಸಡಿಲಗೊಳಿಸಿ ಪಾತಿ ಮಾಡಿ ನೀರು ಮತ್ತು ಗೊಬ್ಬರಗಳನ್ನು ನೀಡುತ್ತಿರಬೇಕು. ಚಾಟನಿ ಮಾಡಿದ ಭಾಗದಲ್ಲಿ ಅಥವಾ ಗಿಡವನ್ನು ಕತ್ತರಿಸಿದ ಭಾಗದಲ್ಲಿ ಸಿ.ಓ.ಸಿ. ಅಥವಾ ಶೇ 1 ಬೋರ್ಡೊ ಪೆಸ್ಟ್‌ ಲೇಪಿಸಬೇಕು.

ADVERTISEMENT

ಐದು ವರ್ಷ ಮೇಲ್ಪಟ ಮಾವಿನ ಗಿಡಗಳ ಸುತ್ತ ಆಳವಾದ ಉಳಿಮೆ ಮಾಡಿ ಬೇವು ಲೆಪಿತ ಯುರಿಯಾ 800 ಗ್ರಾಂ, 600 ಗ್ರಾಂ ಎಮ್.ಓ.ಪಿ, ಮತ್ತು ಬೋರೊಸಾನ್ ಮಿಶ್ರಣ ಮಾಡಿ ಪ್ರತಿ ಗಿಡದ ಬುಡಕ್ಕೆ 3 ರಿಂದ 4 ಅಡಿ ದೂರದಲ್ಲಿ ನೀಡಬೇಕು. ಈ ರೀತಿ ಮಾಡುವುದರಿಂದ ಗಿಡಗಳು ಸಮೃದ್ಧವಾಗಿ ಬೆಳೆದು ಹೆಚ್ಚಿನ ಲಾಭ ತಂದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಹಾಗೂ ತೋಟಗಾರಿಕೆ ಇಲಾಖೆ ತಾಲ್ಲೂಕು ಅಧಿಕಾರಿಗಳನ್ನು ಅಥವಾ ಹಾರ್ಟಿ ಕ್ಲಿನಿಕ್ ಸಲಹಾ ಕೇಂದ್ರ ವಿಷಯ ತಜ್ಞರನ್ನು ಸಂಪರ್ಕಿಸಬೇಕು ಎಂದು ರಾಯಚೂರು ಜಿಲ್ಲೆಯ ಪ್ರಭಾರಿ ತೋಟಗಾರಿಕೆ ಉಪ ನಿರ್ದೇಶಕ ಮಹೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.