ADVERTISEMENT

50 ಆಮ್ಲಜನಕ ಯಂತ್ರ ಖರೀದಿಸಿದ ಜೈನ್ ಸಂಘಟನೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 14:45 IST
Last Updated 3 ಮೇ 2021, 14:45 IST
ರಾಯಚೂರಿನ ಸಂತೋಷ ಹಬ್‌ನಲ್ಲಿ ಭಾರತೀಯ ಜೈನ್‌ ಸಂಘಟನೆಯಿಂದ ಭಾನುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆಮ್ಲಜನಕ ಉತ್ಪತ್ತಿ (ಆಕ್ಸಿಜನ್‌ ಕಾನ್ಸ್‌ಟ್ರೆಂಟರ್‌) ಮಾಡುವ 50 ಯಂತ್ರಗಳನ್ನು ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಟಿಸಿದರು
ರಾಯಚೂರಿನ ಸಂತೋಷ ಹಬ್‌ನಲ್ಲಿ ಭಾರತೀಯ ಜೈನ್‌ ಸಂಘಟನೆಯಿಂದ ಭಾನುವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆಮ್ಲಜನಕ ಉತ್ಪತ್ತಿ (ಆಕ್ಸಿಜನ್‌ ಕಾನ್ಸ್‌ಟ್ರೆಂಟರ್‌) ಮಾಡುವ 50 ಯಂತ್ರಗಳನ್ನು ಶಾಸಕ ಡಾ.ಶಿವರಾಜ ಪಾಟೀಲ ಉದ್ಘಾಟಿಸಿದರು   

ರಾಯಚೂರು: ಭಾರತೀಯ ಜೈನ್ ಸಂಘಟನೆ ರಾಯಚೂರು ಘಟಕವು ಆಮ್ಲಜನಕ ಉತ್ಪತ್ತಿ (ಆಕ್ಸಿಜನ್‌ ಕಾನ್ಸ್‌ಟ್ರೆಂಟರ್‌) ಮಾಡುವ 50 ಯಂತ್ರಗಳನ್ನು ಸಿಂಗಾಪುರದಿಂದ ಖರೀದಿಸಿದ್ದು, ಶಾಸಕ ಡಾ.ಶಿವರಾಜ ಪಾಟೀಲ ಅವರು ಭಾನುವಾರ ಉದ್ಘಾಟಿಸಿದರು.

ಸಂತೋಷ ಹಬ್‌ನಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಡಾ.ಶಿವರಾಜ ಪಾಟೀಲ ಅವರು, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಪ್ರಾಣವಾಯು ಒದಗಿಸುವ ಉದ್ದೇಶಕ್ಕಾಗಿ ಜೈನ್‌ ಸಂಘಟನೆಯು ಈ ಯಂತ್ರಗಳನ್ನು ಖರೀದಿ ಮಾಡಿರುವುದು ಮಾದರಿಯಾಗಿದೆ ಎಂದರು.

ಸಮಾಜದ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಯಂತ್ರಗಳನ್ನು ಖರೀದಿಸಿದ್ದಾರೆ. ಜನರಿಗೆ ಆಮ್ಲಜನಕ ಒದಗಿಸುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಶಿಲ್ಪಾ ಮೆಡಿಕೇರ್‌ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಕಾಂತ್ ಜಿ.ಬೂತಡಾ ಮಾತನಾಡಿ, ರಾಯಚೂರು ಜನತೆಯ ಜೀವನ ರಕ್ಷಣೆಗಾಗಿ ತಮ್ಮ ಕಂಪನಿ ಪರವಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪ್ರತಿದಿನ 5 ಲೀಟರ್‌ ಆಮ್ಲಜನಕ ಪೂರೈಸುವ ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ. ಅತ್ಯಾಧುನಿಕ ನೆಬುಲೈಜರ್‌ ತಂತ್ರಜ್ಞಾನವಿದೆ ಎಂದು ಜೈನ್‌ ಸಂಘಟನೆ ಜಿಲ್ಲಾಧ್ಯಕ್ಷ ಎಸ್. ಕಮಲಕುಮಾರ್ ಜೈನ್ ಹೇಳಿದರು.

ಜಿಲ್ಲಾ ಲಯನ್ಸ್ ಅಧ್ಯಕ್ಷ ಡಾ.ವೆಂಕಟೇಶ ನಾಯಕ, ಜೈನ್‌ ಸಂಘಟನೆ ಉಪಾಧ್ಯಕ್ಷ ಅಜೀತ್ ಸಂಚೇಟಿ, ಸಂಘಟನಾ ಅಧ್ಯಕ್ಷ ದಿನೇಶ ದರತಾರಿ, ಖಜಾಂಚಿ ನರೇಶ್ ಬೊಹರಾ, ಕಾರ್ಯದರ್ಶಿ ಮಹೇಂದ್ರ ಭಂಡಾರಿ, ಬಾಬುರಾವ್ ಎಂ. ಶೇಗುಣಿಸಿ, ಬಸವರಾಜ ಎಂ, ಚೇತನ್, ಆಕಾಶ ಮತ್ತು ವೆಂಕಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.