
ಲಿಂಗಸುಗೂರು: ಪಟ್ಟಣದಲ್ಲಿ ನಿರ್ವಹಿಸುತ್ತಿರುವ ಜಲಧಾರೆ ಯೋಜನೆಯ ಪೈಪ್‌ಲೈನ್ ಅರೆಬರೆ ಕಾಮಗಾರಿಯು ಜನರ ಜೀವಕ್ಕೆ ಕಂಟಕವಾಗುತ್ತಿದೆ.
ಜಿಲ್ಲೆಯ ಜನವಸತಿ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯ ಸಲುವಾಗಿ ಬಸವಸಾಗರ ಜಲಾಶಯದಿಂದ ರಾಯಚೂರು ವರೆಗೆ ಸರ್ಕಾರದಿಂದ ಜಲಧಾರೆ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಂಡಿದೆ. ಈಗಾಗಲೇ ಪಟ್ಟಣದ ಒಳಭಾಗದಲ್ಲಿ ಕಾಮಗಾರಿ ಮಾಡಲಾಗುತ್ತಿದೆ.
ಅರೆಬರೆ ಕಾಮಗಾರಿ: ಕರಡಕಲ್ ಗ್ರಾಮದ ಮೂಲಕ ಪಟ್ಟಣ ಪ್ರವೇಶಿಸಿದ ಬೃಹತ್ ಪೈಪ್‌ಗಳನ್ನು ಅಳವಡಿಸುವ ಕಾಮಗಾರಿ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ತಾಲ್ಲೂಕು ಕ್ರೀಡಾಂಗಣದಿಂದ ಗಡಿಯಾರ ವೃತ್ತವರೆಗೆ ತರಕಾರಿ ಮಾರುಕಟ್ಟೆ, ಮೇನ್ ಬಜಾರ್ ಇರುವದರಿಂದ ಇದು ಜನನಿಬಿಡ ಪ್ರದೇಶವಾಗಿದೆ.
ಇಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಸುಮಾರು 10-15 ಫೀಟ್ ಆಳದವರೆಗೆ ನೆಲ ಅಗೆಯಲಾಗುತ್ತಿದೆ. ಪೈಪ್ ಅಳವಡಿಸುವ ಕೆಲಸ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪೈಪ್‌ಲೈನ್ ಕಾಮಗಾರಿ ಗುತ್ತಿಗೆದಾರರು ಅಗೆದ ನೆಲವನ್ನು ಗಟ್ಟಿ ಹಾಗೂ ಸರಿಯಾಗಿ ಮುಚ್ಚದೇ ಅರೆಬರೆಯಾಗಿ ಮುಚ್ಚುತ್ತಿದ್ದರಿಂದ ಮುಚ್ಚಿದ ಜಾಗದಲ್ಲಿ ದೊಡ್ಡ ಬೋಂಗಾ ಬಿದ್ದು ಸಾರ್ವಜನಿಕರ ಬಲಿಗಾಗಿ ಕಾಯುತ್ತಿವೆ.
ಜೀವಭಯದಲ್ಲಿ ವಾಹನ ಸವಾರರು: ಪಟ್ಟಣದ ಒಳಭಾಗ ಹಾಗೂ ಮಧ್ಯಭಾಗದಿಂದಲೇ ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವುದೇ ಮೊದಲೇ ಜನರ ನೆಮ್ಮದಿಗೆ ಭಂಗ ತಂದಂತಾಗಿದೆ. ಅಂತಹದರಲ್ಲಿ ಅರೆಬರೆ ಕಾಮಗಾರಿಯಿಂದಾಗಿ ಬಿದ್ದಿರುವ ಬೋಂಗಾಗಳು ಜೀವಕ್ಕೆ ಕಂಟಕ ತರುತ್ತಿವೆ.
ತರಕಾರಿ ಮಾರುಕಟ್ಟೆ ಹಾಗೂ ಮೇನ್ ಬಜಾರ್‌ನಲ್ಲಿ ಹೆಚ್ಚು ಜನ ಹಾಗೂ ವಾಹನಗಳ ಓಡಾಟ ಇರುವುದರಿಂದ ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಎದುರಿಗೆ ಮತ್ತೊಂದು ವಾಹನ ಬಂದರೆ ನೇರವಾಗಿ ಬೋಂಗಾದೊಳಗೆ ನುಗ್ಗುವ ಸಂಭವ ಹೆಚ್ಚಾಗಿದೆ. ವಾಹನ ಸವಾರರು ಜೀವದ ಭಯದಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವಂತಾಗುತ್ತಿದೆ.
‘ಬೋಂಗಾ ಬಿದ್ದು ಸಾವು ನೋವು ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ಪೈಪ್‌ಲೈನ್‌ಗಾಗಿ ಅಗೆದ ನೆಲವನ್ನು ಗಟ್ಟಿಯಾಗಿ ಮುಚ್ಚುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಒತ್ತಾಯಿಸಿದರೂ ಅವರು ಇದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಗಳ ಆರೋಪ.
ಪೈಪ್ ಅಳವಡಿಸಿ ಗುತ್ತಿಗೆದಾರರು ಅರೆಬರೆಯಾಗಿ ಅಗೆದ ರಸ್ತೆ ಮುಚ್ಚುತ್ತಿದ್ದರಿಂದ ಪಟ್ಟಣದ ಹನುಮಾನ ಚೌಕ್ ತರಕಾರಿ ಮಾರುಕಟ್ಟೆ ಬಳಿ ಬೋಂಗಾ ಬಿದ್ದಿವೆ. ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕುಶಿವರಾಜ ನಾಯ್ಕ ನಮ್ಮ ಕರ್ನಾಟಕ ಸೇನೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.