ಜಾಲಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ–ಪತಿಗಳಾದ 62 ಜೋಡಿಗಳು
ಜಾಲಹಳ್ಳಿ: ಪಟ್ಟಣದ ಆರಾಧ್ಯ ದೈವ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಶನಿವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 62 ಜೋಡಿ ಸತಿ ಪತಿಗಳಾದರು.
ಕಾರ್ಯಕ್ರಮದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ, ‘ಜನ ನಮ್ಮ ಮೇಲೆ ತುಂಬಾ ಭರವಸೆ ಇಟ್ಟು ಆಯ್ಕೆ ಮಾಡಿದ್ದೀರಿ. ನಿಮ್ಮ ನಂಬಿಕೆಗೆ ದ್ರೋಹ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜನರ ಸೇವಕಿಯಾಗಿ ಕೆಲಸ ಮಾಡುತ್ತೇನೆ’ ಎಂದರು.
‘ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಅಗತ್ಯ ಸೌಲಭ್ಯಕ್ಕೆ ಬೇಕಾಗಿರುವ ಅನುದಾನ ಕಲ್ಪಿಸಲಾಗುವುದು’ ಎಂದು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಇಂದಿರಾ ಮಾತನಾಡಿ, ‘ಸಾಮೂಹಿಕ ವಿವಾಹ 2013ರಲ್ಲಿ ಕೇವಲ 5 ಜೋಡಿಗಳಿಂದ ಪ್ರಾರಂಭಗೊಂಡು ಈಗ 62 ಜೋಡಿಗಳವರೆಗೆ ಮಾಡಿರುವುದು ಕ್ರಾಂತಿಕಾರಿ ಕೆಲಸವಾಗಿದೆ. ಇಲ್ಲಿ ಮದುವೆ ಮಾಡಿಕೊಳ್ಳುವುದರಿಂದ ಸಮಾನತೆಯ ಭಾವ ಮೂಡುತ್ತದೆ. ಎಲ್ಲಾ ಸಮಾಜದ ಸ್ವಾಮೀಜಿಗಳು ಹಾಗೂ ಎಲ್ಲಾ ವರ್ಗದ ಜನರ ಆಶೀರ್ವಾದ ಸಿಗುತ್ತದೆ’ ಎಂದು ಹೇಳಿದರು.
‘ನವ ಜೋಡಿಗಳು ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ, ಅದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಾಮೂಹಿಕ ವಿವಾಹ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಡಿ.ಜೆ ಹಚ್ಚಿಕೊಂಡು ಮೆರವಣಿಗೆ ಮಾಡಬೇಡಿ’ ಎಂದು ಸಲಹೆ ನೀಡಿದರು.
ಪಟ್ಟಣದ ಜಯಶಾಂತಲಿಂಗೇಶ್ವರ ಸ್ವಾಮೀಜಿ, ವೀರಗೋಟದ ಅಡವಿಲಿಂಗ ಸ್ವಾಮೀಜಿ, ಮಂದಕಲ್ ಮಠದ ಬಸವರಾಜಗುರು ಸ್ವಾಮೀಜಿ, ಮುಂಡರಗಿ ದೇವಸ್ಥಾನದ ಪೂಜಾರಿ ಸಾನ್ನಿಧ್ಯ ವಹಿಸಿದ್ದರು.
ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟದ್, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಗೋವಿಂದ ಸೇವಾ ಸಮಿತಿಯ ಗೌರವ ಅಧ್ಯಕ್ಷ ವೆಂಕೋಬ ಪೂಜಾರಿ, ಅಧ್ಯಕ್ಷ ಚಂದ್ರಕಾಂತ ಚಿಕ್ಕಲ್, ಕಾರ್ಯದರ್ಶಿ ಮುದ್ದರಂಗಪ್ಪ ನಾಯಕ ಕ್ಯಾದಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಿಗ್ಗೆ ಎಲ್ಲಾ ಭಕ್ತರಿಗೆ ಉಪ್ಪಿಟ್ಟು, ಮಧ್ಯಾಹ್ನ ಬೂಂದಿ, ಸಜ್ಜೆ ರೊಟ್ಟಿ, ಪುಂಡಿಪಲ್ಲೆ, ಶೇಂಗಾ ಇಂಡಿ, ಅನ್ನ–ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. ಶಾಸಕಿ ಕರೆಮ್ಮ ಜಿ.ನಾಯಕ ಸಾರ್ವಜನಿಕರೊಂದಿಗೆ ಊಟ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.