ADVERTISEMENT

‘ಜಲಜೀವನ ಮಿಷನ್’ ಯೋಜನೆ ಜಾರಿಗೆ ಆದ್ಯತೆ: ಜಿ.ಪಂ.ಸಿಇಒ

​ಪ್ರಜಾವಾಣಿ ವಾರ್ತೆ
Published 31 ಜುಲೈ 2021, 12:25 IST
Last Updated 31 ಜುಲೈ 2021, 12:25 IST
ಶಕ್ತಿನಗರ ಬಳಿಯ ಡಿ.ಯದ್ಲಾಪುರ ಗ್ರಾಮದ ಮನೆಗಳ ನೀಲನಕ್ಷೆಯ ಮೂಲಕ ಶನಿವಾರ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು
ಶಕ್ತಿನಗರ ಬಳಿಯ ಡಿ.ಯದ್ಲಾಪುರ ಗ್ರಾಮದ ಮನೆಗಳ ನೀಲನಕ್ಷೆಯ ಮೂಲಕ ಶನಿವಾರ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಡಿ.ಯದ್ಲಾಪುರ (ಶಕ್ತಿನಗರ): ಡಿ.ಯದ್ಲಾಪುರ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳುವ ಬಗ್ಗೆ ಮನೆ ಮನೆಗೆ ಸರ್ವೆ ಮಾಡಿ, ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿ.ಯದ್ಲಾಪುರ ಗ್ರಾಮದ ಮನೆ ಮನೆಗೆ ಶನಿವಾರ ಭೇಟಿ ನೀಡಿ ಕುಡಿಯುವ ನೀರಿನ ಕಾಮಗಾರಿಯ ವಿಳಂಬದ ಕುರಿತು ಜನರೊಂದಿಗೆ ಚರ್ಚಿಸಿದರು.

ಈ ಹಿಂದೆ ಜನಸಂಖ್ಯೆ ಅನುಗುಣವಾಗಿ ಗ್ರಾಮದಲ್ಲಿ ಪ್ರತಿಯೊಂದು ನಿವೇಶನಕ್ಕೆ ಮನೆಗೊಂದು ನಳ ಹಾಕಲಾಗಿತ್ತು. ಆದರೆ, ಈಗ ಪ್ರತಿಯೊಂದು ನಿವೇಶನದಲ್ಲಿ 3 ಕುಟುಂಬಗಳು ಆಗಿವೆ. ಇದರಿಂದಾಗಿ ನೀರಿನ ಸಮಸ್ಯೆ ಆಗಿದೆ.

ADVERTISEMENT

ಈಗ ಬರುವ ನೀರಿನ ನಳಗಳಿಗೆ ಮೋಟರ್‌ಗಳು ಅಳವಡಿಸುತ್ತಿರುವುದರಿಂದ, ಕೆಲ ಮನೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಬೇಸಿಗೆಯಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಎದುರಾಗಲಿದ್ದು , ಪ್ರತಿಯೊಂದು ಕುಟುಂಬಕ್ಕೆ ಕುಡಿಯುವ ನೀರು ಪೂರೈಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.

ಆರ್‌ಟಿಪಿಎಸ್‌ದಿಂದ ಪ್ರತಿಯೊಂದು ಮನೆಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಕೈಗೊಳ್ಳವುದಾದರೆ, ಅದಕ್ಕೆ ಪ್ರತ್ಯೇಕವಾಗಿ ಪೈಪ್‌ಲೈನ್‌ ಹಾಕಿ, ನೀರಿನ ಟ್ಯಾಂಕ್ ನಿರ್ಮಿಸಬೇಕು. ನಳಗಳಿಗೆ ವಿದ್ಯುತ್ ಮೀಟರ್ ಅಳವಡಿಸಬಾರದು ಎಂದು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು.

ಆರ್‌ಟಿಪಿಎಸ್‌ದಿಂದ ನೀರು ಪೂರೈಕೆ ಮಾಡುತ್ತಿರುವುದು ಸಂತಸ ವಿಚಾರ. ಆದರೆ, ಬರುವ ದಿನಗಳಲ್ಲಿ ಆರ್‌ಟಿಪಿಎಸ್‌ ಸಂಪೂರ್ಣ ಬಂದ್‌ ಆದಲ್ಲಿ, ಎಲ್ಲಿಂದ ನೀರು ಬರುತ್ತದೆ. ಆದ್ದರಿಂದ ಕುಡಿಯುವ ನೀರಿನ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಂಡು ಪ್ರತಿಯೊಂದು ಕುಟುಂಬಕ್ಕೆ ನೀರು ಪೂರೈಕೆ ಮಾಡಲಾಗುವುದು. ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಿಇಒ ಶೇಖ್ ತನ್ವೀರ್ ಆಸೀಫ್ ಅವರು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ, ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ ಡೋಣಿ, ಪಿಡಿಒ ಮಹಾಂತಮ್ಮ, ಎಂಜಿನಿಯರ್‌ ಗಣಪತಿ ಸಾಕ್ರೆ, ಮಹೇಶರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.