ಲಿಂಗಸುಗೂರು: ಜೆಸ್ಕಾಂ ತನ್ನ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿ ಹಣಕ್ಕಾಗಿ ವಿದ್ಯುತ್ ಗ್ರಾಹಕರಿಂದ ವಸೂಲಿ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದೆ. ಆದರೆ ಜೆಸ್ಕಾಂ ನೌಕರರ ಪಿಂಚಣಿ ಹಾಗೂ ಗ್ರಾಚ್ಯುಟಿ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುವ ಮೂಲಕ ಶಾಕ್ ನೀಡಿದೆ. ನೌಕರರಿಗೆ ಸರ್ಕಾರ ಹಾಗೂ ಇಲಾಖೆ ನೀಡಬೇಕಿದ್ದ ಸೌಕರ್ಯಗಳ ವೆಚ್ಚವನ್ನು ಗ್ರಾಹಕರ ತಲೆಗೆ ಕಟ್ಟಲಾಗುತ್ತಿದೆ. ಇದು ಈಗ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದೆ.
ಕೆಇಆರ್‌ಸಿ ಆದೇಶ: 2025 ಏಪ್ರಿಲ್ 1ರಿಂದ ಸರ್ಕಾರಿ ನೌಕರರ ಪಿಂಚಣಿ ಮತ್ತು ಗ್ರಾಚ್ಯುಟಿಗೆ ಬಿಲ್‌ಗಳಲ್ಲಿ ಹೆಚ್ಚುವರಿ ಸರ್‌ಚಾರ್ಜ್ ಆಗಿ ಪ್ರತಿ ಯೂನಿಟ್‌ಗೆ 36 ಪೈಸೆಯನ್ನು ಗ್ರಾಹಕರಿಂದ ವಸೂಲಿ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಜೆಸ್ಕಾಂಗೆ ಆದೇಶ ಮಾಡಿದೆ.
ಬಿಲ್‌ನಲ್ಲಿ ಹೊಸ ಕಾಲಂ: ಜೆಸ್ಕಾಂ ಜುಲೈ ತಿಂಗಳ ವಿದ್ಯುತ್ ಬಿಲ್ ಪ್ರತಿಯಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ಎಂಬ ಹೊಸದಾಗಿ ಸೃಷ್ಟಿ ಮಾಡಲಾಗಿರುವ ಕಾಲಂ ನೋಡಿ ಗ್ರಾಹಕರು ದಂಗಾಗಿದ್ದಾರೆ.
‘200 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ ವಿದ್ಯುತ್ ಗ್ರಾಹಕರಿಗೆ ಕನಿಷ್ಠವೆಂದರೂ ₹1700ರಿಂದ ₹2 ಸಾವಿರ ಬಿಲ್ ಪಾವತಿ ಮಾಡಬೇಕಾಗುತ್ತಿದೆ. ಆದರೆ ಹೆಚ್ಚುವರಿಯಾಗಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕಕ್ಕೆಂದು ಕನಿಷ್ಠ ₹80 ಪಾವತಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗಿನ ಸನ್ನಿವೇಶದಲ್ಲಿ ಬಳಸಿದ ವಿದ್ಯುತ್ ಬಿಲ್ ಕಟ್ಟುವುದೇ ಕಷ್ಟಕರವಾಗಿದೆ. ಇದರ ಜೊತೆಗೆ ಇಲಾಖೆಯ ನೌಕರರಿಗೆ ನೀಡಬೇಕಾದ ಪಿಂಚಣಿ ಹಣವನ್ನು ಭರಿಸಲು ಆಗದೆ, ಪ್ರತಿ ಯೂನಿಟ್ ವಿದ್ಯುತ್ ಮೇಲೆ 36 ಪೈಸೆ ನಮ್ಮಿಂದ ವಸೂಲಿ ಮಾಡುವುದು ಸರಿಯಲ್ಲ’ ಎಂದು ಗ್ರಾಹಕ ಕೆ.ಶಿವರಾಜ ಹೇಳುತ್ತಾರೆ.
‘ಕೆಇಆರ್‌ಸಿ ತನ್ನ ನೌಕರರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ಹಣವನ್ನು ಕೊಡಬೇಕು. ಅದು ಆ ಸಂಸ್ಥೆಯ ಜವಾಬ್ದಾರಿ ಕೂಡ. ಆದರೆ, ಆ ಹಣವನ್ನು ಜನರ ಮೇಲೆ ಹಾಕಿ ವಸೂಲಿ ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಈ ಕ್ರಮವನ್ನು ಹಿಂಪಡೆಯಬೇಕು’ ಎಂದು ಗ್ರಾಹಕ ವಿಶ್ವನಾಥರಡ್ಡಿ (ಬಾಬುಗೌಡ) ಹಿಲಾಲಾಪುರ ಒತ್ತಾಯಿಸುತ್ತಾರೆ.
ವಿದ್ಯುತ್ ಬಿಲ್‌ನಲ್ಲಿ ಪಿಂಚಣಿ ಮತ್ತು ಗ್ರಾಚ್ಯುಟಿ ಶುಲ್ಕ ವಿಧಿಸಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುವೆಬನ್ನಪ್ಪ ಕರಿಬಂಟನಾಳ ಜೆಸ್ಕಾಂ ಎಇಇ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.