
ರಾಯಚೂರು: ಜೆಸ್ಕಾಂನ ರಾಯಚೂರು ವೃತ್ತ ಮಟ್ಟದಲ್ಲಿ 94 ನೌಕರರ ಬಡ್ತಿ ಪ್ರಕ್ರಿಯೆಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜೆಸ್ಕಾಂ ಕಚೇರಿ ಎದುರು ಜೆಸ್ಕಾಂ ನೌಕರರು ಹಾಗೂ ಕಿರಿಯ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ರಾಯಚೂರಿನಲ್ಲಿ 94 ನೌಕರರಿಗೆ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಣೆಗೊಂಡು ಅಕ್ಷೇಪಣೆ ಸಲ್ಲಿಸಲು ನೀಡಿರುವ ಅವಧಿ ಮುಕ್ತಾಯಗೊಂಡಿದ್ದರೂ ಅಂತಿಮ ಜೇಷ್ಠತಾ ಪಟ್ಟಿ ಹೊರಡಿಸಿಲ್ಲ. ಕೆಳ ಹಂತದ ನೌಕರರ ಬಡ್ತಿಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೌಕರರ ಬಡ್ತಿ ಪ್ರಕ್ರಿಯೆಯನ್ನು 7 ದಿನಗಳೊಳಗಾಗಿ ನಡೆಸುವಂತೆ ನೌಕರ ಸಂಘ ಮತ್ತು ಪ.ಜಾ/ಪ.ಪಂ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿತ್ತು. ಆದರೂ, ಅಧಿಕಾರಿಗಳು ಆಸಕ್ತಿ ತೋರಿಸದ ಕಾರಣ ಪ್ರತಿಭಟನೆ ಮಾಡಬೇಕಾಯಿತು ಎಂದು ಹೇಳಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ನಿರ್ದೇಶಕರು, ಮುಖ್ಯ ಎಂಜಿನಿಯರ್ ಅವರಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ಗಮನಕ್ಕೆ ತರಲಾಗಿದೆ. ಮೌಖಿಕ ಒಪ್ಪಿಗೆ ನೀಡಿದರೂ ಆದೇಶ ಜಾರಿಗೊಳಿಸಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
94 ನೌಕರರಿಗೆ ಬಡ್ತಿ ನೀಡಬೇಕು. 12 ಬಿ ಅಡಿಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಗೆ ಬಡ್ತಿ ನೀಡಬೇಕು. ಟಿ.ಎಲ್.ಎಮ್. ನೌಕರರು, ಲೈನ್ ಮೆಕ್ಯಾನಿಕ್ ದರ್ಜೆ-1, ಮತ್ತು 2, ಸ್ಟೇಷನ್ ಮೆಕ್ಯಾನಿಕ್ ದಜೆ-2, ಮತ್ತು 1, ಲೈನ್‌ಮ್ಯಾನ್ ಮತ್ತು ಸಹಾಯಕ ಲೈನ್ ಮ್ಯಾನ್, ಪವರ್ ಮ್ಯಾನ್, ಕಿರಿಯ ಪವರ್ ಮ್ಯಾನ್ ಹುದ್ದೆಗಳ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಜೆಸ್ಕಾಂ ಅಧೀಕ್ಷಕ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ಸ್ಥಳಕ್ಕೆ ಬಂದು, ‘ನಿಮ್ಮ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಲಾಗುವುದು. ನಿಗಮದ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಂಡು ತಕ್ಷಣ ಪ್ರತಿಭಟನೆ ನಿಲ್ಲಿಸಬೇಕು ಎಂದು ಪ್ರತಿಭಟನೆಕಾರರಿಗೆ ಮನವಿ ಮಾಡಿದರು.
ಆದರೆ, ಪ್ರತಿಭಟನಾಕಾರರು ಯಾವುದಕ್ಕೂ ಒಪ್ಪದೇ ಕೆಲಸ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಳ್ಳುತ್ತೇವೆ. ಆದರೆ, ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಸರತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ವೆಂಕಟೇಶ, ಸಂಜುಕುಮಾರ, ಚಿನ್ನಪ್ಪ, ಹನುಮಂತರಾಯ, ಮಲ್ಲಣ್ಣ, ಶಿವಕುಮಾರ, ಜೆ.ಎಲ್.ಗೋಪಿ, ಅಮರೇಷ, ಕುಮಾರಸ್ವಾಮಿ, ರವಿಚಂದ್ರ, ಕಾಸೀಂಸಾಬ, ಅಸ್ಲತ್‌ಪಾಷಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.