ADVERTISEMENT

ರಾಯಚೂರು: ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 7:19 IST
Last Updated 11 ಡಿಸೆಂಬರ್ 2025, 7:19 IST
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮವನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಕಾರ್ಯಕರ್ತರು ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮವನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಕಾರ್ಯಕರ್ತರು ರಾಯಚೂರಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ರಾಯಚೂರು: ಉದ್ಯೋಗಾಂಕ್ಷಿಗಳ ಬೇಗುದಿಗೆ ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಧಾರವಾಡದಲ್ಲಿ ಯಾವುದೇ ನೋಟೀಸ್ ನೀಡದೇ, ಧರಣಿಗೆ ಸಜ್ಜಾಗುತ್ತಿದ್ದ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮವನ್ನು ವಿರೋಧಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಕಾರ್ಯಕರ್ತರು ನಗರದ ಡಾ.ಆರ್‌.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಂಟಿ ಕಾರ್ಯದರ್ಶಿ ವಿನೋದಕುಮಾರ ಮಾತನಾಡಿ, ‘ಇದು ಜನತಂತ್ರವನ್ನು ದಮನ ಮಾಡಿರುವ ಹೀನಾಯ ನಡೆಯಾಗಿದೆ. ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಕನಿಷ್ಠ ಪ್ರತಿಭಟನೆಯ ಹಕ್ಕು ಲಭ್ಯವಿಲ್ಲ ಎಂದು ಇದರಿಂದ ಜಗಜ್ಜಾಹೀರಾಗಿದೆ’ ಎಂದರು.

‘ಹಲವು ತಿಂಗಳುಗಳಿಂದ ಖುದ್ದಾಗಿ ಮುಖ್ಯಮಂತ್ರಿ ಅವರ ಭೇಟಿಗೆ ಅವಕಾಶ ಕೇಳುತ್ತಲೇ ಇದ್ದರೂ, ಮುಖ್ಯ ಕಾರ್ಯದರ್ಶಿಗೆ ಉದ್ಯೋಗಾಕಾಂಕ್ಷಿಗಳ ಹಕ್ಕೊತ್ತಾಯಗಳ ಆಗ್ರಹಪತ್ರವನ್ನು ತಲುಪಿಸಿದ್ದರೂ ಸಹ ಕನಿಷ್ಠ ಮಟ್ಟದ ಸ್ಪಂದನೆಯನ್ನೂ ನೀಡಿಲ್ಲ. ಯಾವುದೇ ಬದ್ಧತೆಯನ್ನು ತೋರದೆ ಸರ್ಕಾರವು ಉದ್ಯೋಗಾಂಕ್ಷಿಗಳನ್ನು ಬಂಧಿಸಿ ರಾಜ್ಯವನ್ನು ಪೊಲೀಸ್ ರಾಜ್ಯವನ್ನಾಗಿಸಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಇದು ಅತ್ಯಂತ ಯುವಜನ ವಿರೋಧಿ ಕ್ರಮವಷ್ಟೇ ಅಲ್ಲ. ಯುವಜನರ ಬವಣೆಗೆ ಕವಡೆ ಕಾಸಿನ ಕಿಮ್ಮತ್ತನ್ನು ನಾವು ನೀಡುವುದಿಲ್ಲ, ಅವರು ನಮಗೆ ಕೇವಲ ಮತಬ್ಯಾಂಕ್ ಅಷ್ಟೇ ಎಂಬ ಕಾಂಗ್ರೆಸ್ ಸರ್ಕಾರದ ನಿಲುವಿಗೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ. ಉದ್ಯೋಗದ ಕನಿಷ್ಠ ಹಕ್ಕು ಕೇಳುವುದೇ ಕಾಂಗ್ರೆಸ್ ಆಡಳಿತದಲ್ಲಿ ಅಪರಾಧ ಎಂದು ಸರ್ಕಾರವು ಬಗೆಯುತ್ತಿದೆ. ಒಳಮಿಸಲಾತಿಯ ಕುಂಟು ನೆಪವನ್ನು ಮುಂದಿಟ್ಟುಕೊಂಡು ಹಲವು ತಿಂಗಳುಗಳಿಂದ ನೇಮಕಾತಿಯನ್ನು ವಿಳಂಬ ಮಾಡುತ್ತಿದೆ’ ಎಂದು ಆರೋ‍ಪಿಸಿದರು.

ಕಾರ್ಮಿಕ ಮುಖಂಡರಾದ ವೀರೇಶ ಎನ್.ಎಸ್ ಮಾತನಾಡಿ, ‘ಸರ್ಕಾರದ ಈ ದಮನಕಾರಿ ಕ್ರಮಕ್ಕೆ ಉದ್ಯೋಗಾಕಾಂಕ್ಷಿಗಳು ಬೆದರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವು ಮುಂದುವರಿಯುತ್ತದೆ ಮತ್ತು ಇನ್ನು ಬಲಿಷ್ಠವಾಗುತ್ತದೆ ಹಾಗೂ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಸಿದರು.

‘ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ಸಹ ಸಂಚಾಲಕ ಭವಾನಿ ಶಂಕರ್ ಎಸ್. ಗೌಡ, ಚನ್ನಬಸವ ಜಾನೇಕಲ್, ಎಐಡಿವೈಒ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಭಾಳ್, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಲಕ್ಷಣ ಜಡಗಣ್ಣವರ್, ಎಐಡಿವೈಒ ರಾಜ್ಯ ಉಪಾಧ್ಯಕ್ಷರಾದ ಜಗನ್ನಾಥ ಎಸ್. ಎಚ್. ಕರ್ನಾಟಕ ರಾಜ್ಯ ರೈತ ಸೇನಾ ರಾಜ್ಯ ಅಧ್ಯಕ್ಷ ಶಂಕರ ಅಂಬಲಿ, ರೈತ ಮುಖಂಡ ಸಿದ್ದುಗೌಡ ಮೋದಗಿ, ಉದ್ಯೋಗಾಕಾಂಕ್ಷಿ ಫಾಲಾಕ್ಷ.ಕೆ ಮತ್ತಿತರರನ್ನು ಬಂಧಿಸಲಾಗಿದೆ. ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಉದ್ಯೋಗಾಕ್ಷಿಗಳ ನ್ಯಾಯಯುತ ಬೇಡಿಕೆಗಳು ಈಡೇರುವತನಕ ಈ ಹೋರಾಟದ ಕಾವನ್ನು ಕಾಪಾಡಿಕೊಳ್ಳಬೇಕು ಎಂದು ಹೋರಾಟ ಸಮಿತಿ ಸದಸ್ಯರಿಗೆ ಮನವಿ ಮಾಡಿದರು.

ಈ ಪ್ರತಿಭಟನೆಯಲ್ಲಿ ಶಿವಪ್ಪ ಆಸ್ಕಿಹಾಳ, ಕೃಷ್ಣ ಮನ್ನಲಾಪುರ, ಶಿವರಾಜ್, ಚೇತತ, ಮುನೇಶ, ಜಾಫರ್, ಕೃಷ್ಣ ಹಾಗೂ ಇನ್ನಿತರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.