ADVERTISEMENT

ರಾಯಚೂರು | ಗ್ರಾ.ಪಂಗೊಂದು ಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 5:57 IST
Last Updated 3 ಮಾರ್ಚ್ 2026, 5:57 IST
ರಾಯಚೂರಿನಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು 
ರಾಯಚೂರಿನಲ್ಲಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು     

ರಾಯಚೂರು: ‘ಶೀಘ್ರ ಗತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಜೋಳ ಖರೀದಿ ಕೇಂದ್ರ ತೆರೆಯಬೇಕು. ಜೋಳ ಖರೀದಿ ಪ್ರಕ್ರಿಯೆಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಜೋಳ ಕಟಾವು ಕಾರ್ಯ ಮುಗಿದು ಒಂದು ತಿಂಗಳು ಕಳೆದಿದೆ.  ಎರಡು ತಿಂಗಳಿನಿಂದ ನೋಂದಣಿ ಕಾರ್ಯದಲ್ಲಿ ಕಾಲಹರಣ ಮಾಡುತ್ತಿರುವುದು ಅತ್ಯಂತ ಖಂಡನೀಯ’ ಎಂದು ಆಕ್ರೋಶ ಹೊರಹಾಕಿದರು.

‘ಖಾಲಿ ಚೀಲ ಖರೀದಿಸುವ ನೆಪದಲ್ಲಿ ಖರೀದಿ ಕೇಂದ್ರ ತೆರೆಯದೇ ವಿಳಂಬ ಮಾಡಿರುವುದು ಸರ್ಕಾರ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಕೆಲವು ರೈತರು ಬೆಳೆ ಬೆಳೆಯಲು ಪಡೆದ ಸಾಲ ತೀರಿಸಲು ಹಾಗೂ ಇತರೆ ಕಾರಣಗಳಿಂದ ಖಾಸಗಿ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ನಷ್ಟಕ್ಕೊಳಗಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರ ತೆರೆಯದ ಕಾರಣದಿಂದ, ಕನಿಷ್ಠ ಬೆಂಬಲ ಬೆಲೆಯ ಲಾಭ ವರ್ತಕರಿಗೆ ದೊರೆಯುತ್ತದೆ’ ಎಂದು ಹೇಳಿದರು.

ADVERTISEMENT

‘ರೈತರ ಆರ್ಥಿಕ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ದಲ್ಲಾಳಿಗಳು, ಕಡಿಮೆ ಬೆಲೆಗೆ ಖರೀದಿಸಿ  ಅವರ ಹೆಸರಿನಲ್ಲಿ ನೋಂದಣಿ ಮಾಡಿಸಿ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಭ್ರಷ್ಟಾಚಾರದ ವ್ಯವಹಾರದಲ್ಲಿ ಸ್ಥಳೀಯ ಸೊಸೈಟಿ  (ಸಹಕಾರ ಸಂಘಗಳು) ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇಂತಹ ಅಧಿಕಾರಿಗಳು ಖಾಸಗಿ ವ್ಯಾಪಾರಿಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಎರಡು ವರ್ಷಗಳಿಂದ ಅನೇಕ ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷ ತನಿಖಾ ತಂಡ ಸಿಂಧನೂರು ಸೇರಿ ಜಿಲ್ಲೆಯ ಇತರೆ ತಾಲ್ಲೂಕಿಗಳಲ್ಲಿ ತನಿಖೆ ಕೈಗೊಂಡರೂ ಅಕ್ರಮ ಪತ್ತೆಹಚ್ಚಿ ಯಾವ ಅಧಿಕಾರಿಗಳನ್ನೂ ಶಿಕ್ಷೆಗೊಳಪಡಿಸಿರುವುದಿಲ್ಲ. ಒಳಗಿಂದೊಳಗೆ ಅಕ್ರಮ-ವ್ಯವಹಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಯಿತು. ಇಂತಹ ಬೆಳವಣಿಗೆಗಳಿಗೆ ಜಿಲ್ಲಾಡಳಿತವೇ ನೇರ ಹೊಣೆ’ ಎಂದು ಆರೋಪಿಸಿದರು.

‘ಜಾಗದ ಸಮಸ್ಯೆಯಿಂದ ರೈತರು ತಮ್ಮ ಮನೆಯ ಮುಂದಿನ, ರಸ್ತೆ ಬೀದಿಗಳಲ್ಲಿ ಜೋಳದ ನಿಟ್ಟನ್ನು ಹಾಕಿದ್ದಾರೆ. ಈಗಾಗಲೇ ಜಿಲ್ಲೆಯ ಕೆಲ ಭಾಗದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಜೋಳ ಹಾಳಾಗಿದೆ. ಪುನಃ ಮಳೆ ಬರುವ ಸಾಧ್ಯತೆ ಇರುವುದರಿಂದ ಶೀಘ್ರಗತಿಯಲ್ಲಿ ಖರೀದಿ ಕೇಂದ್ರ ತೆರೆದು ರೈತರನ್ನು ನಷ್ಟದಿಂದ ಪಾರು ಮಾಡಬೇಕಾಗಿದೆ’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ, ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಿಲೋಗಲ್, ಚಿಟ್ಟಿ ಬಾಬು, ರಮೇಶ ಪಾಟೀಲ, ಹುಲಿಗಪ್ಪ ಸಿರವಾರ, ಹನುಮಂತ, ನಾಗರಾಜ ಸಿರವಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.