ADVERTISEMENT

ಕಲ್ಯಾಣ ಕರ್ನಾಟಕದಲ್ಲಿ ‘ಕಲಿಕೆಯೇ ಕಲ್ಯಾಣ’ ಅಭಿಯಾನ: ಅಬೂಬ್‍ಕರ್ ಸಿದ್ದಿಕಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:12 IST
Last Updated 17 ಜನವರಿ 2026, 7:12 IST
ಅಬೂಬ್‍ಕರ್ ಸಿದ್ದಿಕಿ
ಅಬೂಬ್‍ಕರ್ ಸಿದ್ದಿಕಿ   

ಸಿಂಧನೂರು: ‘ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿರುವ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗಾಗಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ ಹಾಗೂ ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆಂಡ್ ಅನಾಲಿಸಿಸ್ ಸಹಯೋಗದಲ್ಲಿ ಡಿ.15ರಿಂದ ಫೆ.15 ರವರೆಗೆ ಎರಡು ತಿಂಗಳ ಕಾಲ ‘ಕಲಿಕೆಯೇ ಕಲ್ಯಾಣ’ ಅಭಿಯಾನ ನಡೆಸಲಾಗುತ್ತಿದೆ ಎಂದು ಎಸ್‍ಐಒ ರಾಜ್ಯ ಘಟಕದ ಕಾರ್ಯದರ್ಶಿ ಅಬೂಬ್‍ಕರ್ ಸಿದ್ದಿಕಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳು ಶೈಕ್ಷಣಿಕವಾಗಿ ತೀರಾ ಹಿಂದುಳಿದಿವೆ. ಇತ್ತೀಚಿನ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ವಿದ್ಯಾರ್ಥಿಗಳ ಕಾರ್ಯಕ್ಷಮತೆಯಲ್ಲಿನ ಆತಂಕಕಾರಿ ಮಟ್ಟವನ್ನು ಎತ್ತಿ ತೋರಿಸಿದೆ’ ಎಂದರು.

‘ಇದರ ಕುರಿತು ವಾರ್ಡ್‍ಗಳು, ಮಸೀದಿಗಳಿಗೆ ಭೇಟಿ ನೀಡಿ, ರಾಜಕೀಯ ನಾಯಕರು, ಶಿಕ್ಷಣ ತಜ್ಞರನ್ನು ಭೇಟಿ ಮಾಡಿ ಚರ್ಚಿಸಿ ಸಲಹೆ ಪಡೆದು ಅರಿವು ಮೂಡಿಸುವುದು, ಎಸ್‍ಎಸ್‌ಎಲ್‌ಸಿ ಯಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಎಸ್‍ಐಒ ವತಿಯಿದ ಕೆರಿಯರ್ ಅಕಾಡೆಮಿ ಆರಂಭಿಸಿ ವಿಶೇಷ ತರಬೇತಿ ನೀಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮಟ್ಟಿಗೆ ಆತ್ಮಸ್ಥೈರ್ಯ ಬೆಳೆಸುವುದು ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವುದು, ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶ’ ಎಂದು ವಿವರಿಸಿದರು.

ಎಸ್‍ಐಒ ಜಿಲ್ಲಾ ಘಟಕದ ಅಧ್ಯಕ್ಷ ಇಮ್ತಿಯಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಅಫ್ಜಲ್ ಹುಸೇನ್, ಕ್ಯಾಂಪಸ್ ಕಾರ್ಯದರ್ಶಿ ಯಹಿಯಾ ರಜ್ಬಿ, ಸಹ ಕಾರ್ಯದರ್ಶಿ ಅಮೀರ್ ಸೋಹೆದ್, ಸದಸ್ಯರಾದ ನ್ಯೂಮಾನ್, ಸಮೀರ್ ಅಲಿ, ಶಜಿವುದ್ದೀನ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.