ADVERTISEMENT

Kalyana Karnataka Utsav | 371(ಜೆ) ಕಲ್ಯಾಣ ಕರ್ನಾಟಕಕ್ಕೆ ಶ್ರೀರಕ್ಷೆ: ಸಚಿವ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 6:25 IST
Last Updated 18 ಸೆಪ್ಟೆಂಬರ್ 2025, 6:25 IST
ರಾಯಚೂರಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು
ರಾಯಚೂರಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿದರು    

ರಾಯಚೂರು: ‘ಕಲ್ಯಾಣ ಕರ್ನಾಟಕದ ಜನತೆಗೆ 371(ಜೆ) ಕಾಮಧೇನು ಶ್ರೀರಕ್ಷೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು

‘ಕಲ್ಯಾಣ ಕರ್ನಾಟಕಕ್ಕೆ 371(ಜೆ) ಸ್ಥಾನಮಾನದ ಬಳಿಕ ಈ ಭಾಗದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲು ದೊರೆಯಲು ಸಾಧ್ಯವಾಗಿದೆ. ಕಳೆದ 10 ವರ್ಷಗಳಲ್ಲಿ 80 ಸಾವಿರ ಸರ್ಕಾರಿ ನೌಕರಿ ಪಡೆದುಕೊಂಡಿದ್ದಾರೆ. ₹ 18,000 ಕೋಟಿ ಹಣ ಮಂಜೂರಾಗಿದೆ’ ಎಂದು ತಿಳಿಸಿದರು.

ADVERTISEMENT

‘ಅಖಂಡ ಭಾರತ ನಿರ್ಮಾಣದ ಪ್ರಯತ್ನ, ಹೋರಾಟಗಾಥೆ ಸಾಮಾನ್ಯವಾದ ಸಂಗತಿಯಲ್ಲ. ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನದ ಭದ್ರಬುನಾದಿಯ ಮೇಲೆ ದೇಶ ನಡೆಯುತ್ತಿದೆ’ ಎಂದರು.

‘ರಾಜ್ಯ ಸರ್ಕಾರವು 371(ಜೆ) ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಮಂಜೂರಾತಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ’ ಎಂದು ತಿಳಿಸಿದರು.

‘ರಾಯಚೂರ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ₹ 40 ಕೋಟಿ ವೆಚ್ಚದಲ್ಲಿ ಕನ್ವೆಷನ್‌ ಹಾಲ್‌ ನಿರ್ಮಿಸಲಾಗುತ್ತಿದೆ’ ಎಂದು ಹೇಳಿದರು.

ರಾಯಚೂರು ನಗರ ಕ್ಷೇತ್ರದ ಶಾಸಕ ಡಾ.ಎಸ್.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಮಹರ್ಷಿ ವಾಲ್ಮೀಕಿ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ರಾಯಚೂರು ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರಾಯಚೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪವನಕಿಶೋರ್ ಪಾಟೀಲ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ಮಹಾನಗರಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, 2ನೇ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸುರೇಶ ವರ್ಮಾ ಉಪಸ್ಥಿತರಿದ್ದರು.

ಕೆಇಬಿ ಸರ್ಕಾರಿ ಶಾಲೆಯ ಶಿಕ್ಷಕಿ ಯಶೋದಾ ಹಾಗೂ ಗಾಜಗೇರಪೇಟೆ ಸರ್ಕಾರಿ ಪೌಢ ಶಾಲೆಯ ಶಿಕ್ಷಕಿ ಮಹೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

- ಆಕರ್ಷಕ ಪಥ ಸಂಚಲನ
ಧ್ವಜಾರೋಹಣದ ನಂತರ ಕೆಎಸ್‌ಆರ್‌ಪಿ ಡಿಎಆರ್‌ ನಾಗರಿಕ ಪೊಲೀಸ್‌ ಮಹಿಳಾ ಪೊಲೀಸ್‌ ಗೃಹ ರಕ್ಷಕ ದಳ ಅರಣ್ಯ ಇಲಾಖೆ ಎನ್‌ಸಿಸಿ ಕೆಡೆಟ್ ಸ್ಕೌಟ್ಸ್‌ ಮತ್ತು ಗೈಡ್ಸ್ ಭಾರತ ಸೇವಾ ದಳ ರವೀಂದ್ರನಾಥ ಟ್ಯಾಗೋರ್‌ ಪ್ರೌಢ ಶಾಲೆ ಸೇಂಟ್‌ ಮೇರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಪಥಸಂಚಲನ ನಡೆಸಿದರು.
ಬಳಲಿದ ವಿದ್ಯಾರ್ಥಿಗಳು
ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಳಲಿ ಕುಸಿದು ಕೆಳಗೆ ಬಿದ್ದರು. ಆಂಬುಲೆನ್ಸ್‌ನಲ್ಲಿದ್ದ ವೈದ್ಯಕೀಯ ತಂಡ ತಕ್ಷಣ ಬಾಲಕಿಗೆ ಚಿಕಿತ್ಸೆ ನೀಡಿತು. ಬಾಲಕನಿಗೂ ಉಪಾಚಾರ ಮಾಡಿತು. ಮಕ್ಕಳು ಧ್ವಜಾರೋಹಣ ಕಾರ್ಯಕ್ರಮಕ್ಕೆ ಬೆಳಿಗ್ಗೆ ಬೇಗ ಬಂದ ಕಾರಣ ತಲೆ ಸುತ್ತು ಬಂದಿತ್ತು. ಪಥ ಸಂಚಲನಕ್ಕೆ ಬಂದಿದ್ದ ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಬೇಕಿತ್ತು. ಆದರೆ ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಮಕ್ಕಳು ಬಳಲುವಂತಾಯಿತು ಎಂದು ಶಿಕ್ಷಕರು ಅಧಿಕಾರಿಗಳು ಗಮನಕ್ಕೆ ತಂದರು.

‘ಆರ್ಥಿಕವಾಗಿ ಸದೃಢವಾಗಬೇಕಿದೆ’

ಲಿಂಗಸುಗೂರು: ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕಲ್ಯಾಣ ಕರ್ನಾಟಕ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸದೃಢಗೊಳ್ಳಬೇಕಿದೆ ಎಂದು ಉಪವಿಭಾಗಾಧಿಕಾರಿ ಬಸವಣಪ್ಪ ಕಲಶೆಟ್ಟಿ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಬಾಬುರಡ್ಡಿ ಮುನ್ನೂರು, ನಯೋಪ್ರಾ ಅಧ್ಯಕ್ಷ ಭೂಪನಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಪಾಮಯ್ಯ ಮುರಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯೆ ಮಂಜುಳಾ ಬಡಿಗೇರ, ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ, ತಹಶೀಲ್ದಾರ್ ಸತ್ಯಮ್ಮ, ತಾಲ್ಲೂಕು ಪಂಚಾಯಿತಿ ಇಒ ಉಮೇಶ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ, ಬಿಇಒ ಸುಜಾತಾ ಹೂನೂರು ಇದ್ದರು.

ಹೋರಾಟ ಸ್ಮರಣೀಯ

ಮಾನ್ವಿ: ‘ರಜಾಕರ ದಬ್ಬಾಳಿಕೆ ವಿರುದ್ಧ ಕಲ್ಯಾಣ ಕರ್ನಾಟಕ ಭಾಗದ ವಿಮೋಚನೆಗಾಗಿ ಹೋರಾಡಿದ ಹಲವು ಮಹನೀಯರ ತ್ಯಾಗ ಚಿರಸ್ಮರಣೀಯ’ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಹಶೀಲ್ದಾರ್ ಭೀಮರಾಯ ರಾಮಸಮುದ್ರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ನಂತರ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಆಚರಣೆಗೆ ಶಾಸಕ ಜಿ.ಹಂಪಯ್ಯ ನಾಯಕ ಚಾಲನೆ ನೀಡಿದರು. ವಿಶ್ವಕರ್ಮ ಸಮುದಾಯದ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಪುರಸಭೆ ಸೇರಿದಂತೆ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಹಮ್ಮಿಕೊಳ್ಳಲಾಗಿತ್ತು.

ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಕೆ.ಅಮರೇಶಪ್ಪ, ಪುರಸಭೆಯ ಅಧ್ಯಕ್ಷೆ ಮೀನಾಕ್ಷಿ ಡಿ.ರಾಮಕೃಷ್ಣ, ಸದಸ್ಯ ರಾಜಾ ಮಹೇಂದ್ರ ನಾಯಕ ಸೇರಿದಂತೆ ಪುರಸಭೆಯ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

‘ಅಸಮಾನತೆ ತೊಲಗಿಸಲು ಯತ್ನ’

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತಿವರ್ಷ ಬಜೆಟ್‍ನಲ್ಲಿ ₹5 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವ ಮೂಲಕ ಪ್ರಾದೇಶಿಕ ಅಸಮಾನತೆ ತೊಲಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹೇಳಿದರು.

ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಆವರಣದಲ್ಲಿ ಬುಧವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮಾತನಾಡಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ. ದೊಡ್ಡಬಸವರಾಜ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಡಿವೈಎಸ್‍ಪಿ ಬಿ.ಎಸ್.ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ ಉಪಸ್ಥಿತರಿದ್ದರು.

ಉತ್ಸವದ ಸಂಭ್ರಮ

ಮುದಗಲ್: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಲಾಯಿತು.

ಪುರಸಭೆಯಲ್ಲಿ ಅಧ್ಯಕ್ಷೆ ಮಹಾದೇವಮ್ಮ ಗುತ್ತೇದಾರ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಹಿಳಾ ಸದಸ್ಯರುಗಳು, ಕೆಲ ಪುರಸಭೆ ಸದಸ್ಯರು ಗೈರಾಗಿರಿದ್ದರು.

ಪೊಲೀಸ ಠಾಣೆಯಲ್ಲಿ ಪಿಎಸ್‌ಐ ವೆಂಕಟೇಶ ಮಾಡಗೇರಿ, ಕಂದಾಯ ಭವನದಲ್ಲಿ ಉಪ ತಹಶೀಲ್ದಾರ್ ತುಳಜಾರಾಮಸಿಂಗ್, ಸಮುದಾಯ ಆರೋಗ್ಯ ಕೇಂದ್ರದ, ಶಾಲಾ ಕಾಲೇಜುಗಳಲ್ಲಿ ಮುಖ್ಯಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು ಧ್ವಜಾರೋಹಣ ನೆರವೇರಿಸಿದರು.

ಉಪಾಧ್ಯಕ್ಷ ಅಜಮೀರ್ ಬೆಳ್ಳಿಕಟ್, ಸದಸ್ಯರಾದ ಗುಂಡಪ್ಪ ಗಂಗಾವತಿ, ಎಸ್.ಆರ್. ರಸೂಲ, ತಸ್ಲಿಂ, ಶಿವಗ್ಯಾನಪ್ಪ ಬಡಕುರಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮುಜಾಕೀರ ಹುಸೇನ್, ಹಸನ್, ಮಹಿಬೂಬ ಬಾರಿಗಿಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕರಿಯಪ್ಪ ಯಾದವ, ನಾಗರಾಜ ತಳವಾರ, ಶಂಕ್ರಪ್ಪ ಜೀಡಿ, ಬಸವರಾಜ ಬಂದಕಮನಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ ಬೋಗಾರ, ವ್ಯವಸ್ಥಾಪಕ ಸುರೇಶ, ದಳಪತಿ ರಾಜಾಮೀಯಾ, ರವಿ ಕಟ್ಟಿಮನಿ ಇದ್ದರು.

9 ತಿಂಗಳಿನಲ್ಲಿ 545 ಕೆಜಿ ಚಿನ್ನ ಉತ್ಪಾದನೆ: ವಿದಾತ್ರಿ

ಹಟ್ಟಿ ಚಿನ್ನದ ಗಣಿ: ‘2025-26ನೇ ಸಾಲಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 545 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗಿದೆ’ ಎಂದು ಗಣಿ ಕಂಪನಿಯ ಲೋಹ ವಿಭಾಗದ ಉಪಪ್ರಧಾನ ವ್ಯವಸ್ಧಾಪಕಿ ವಿದಾತ್ರಿ ಹೇಳಿದರು.

ಹಟ್ಟಿ ಪಟ್ಟಣದ ಧಾರುವಾಲ ಕ್ರೀಡಾಂಗಣ ಆವರಣದಲ್ಲಿ ಗಣಿ ಕಂಪನಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘3.47 ಮೆಟ್ರಿಕ್ ಟನ್ ಅಧಿರು ಸಂಸ್ಕರಣೆ ಮಾಡಲು ಗುರಿ ಹೊಂದಲಾಗಿತ್ತು, ಆದರೆ 2.39 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿಲಾಗಿದೆ. 9 ತಿಂಗಳಿನಲ್ಲಿ 706.983 ಕೆಜಿ ಚಿನ್ನ ಉತ್ತಾದನೆ ಗುರಿ ಹೊಂದಲಾಗಿತ್ತು. 545.844.ಕೆಜಿ ಚಿನ್ನ ಉತ್ಪಾದಿಸಲಾಗಿದೆ’ ಎಂದರು.

ಉಪ ಪ್ರಧಾನ ವ್ಯವಸ್ಧಾಪಕ (ಮಾಸ) ಯಮನೂರಪ್ಪ ಮಾತನಾಡಿದರು. ಗಣಿ ಕಂಪನಿಯ ಪ್ರಭಾರ ಕಾರ್ಯನಿರ್ವಾಹಕ ನಿರ್ದೇಶಕ ಅರುಣವ ಘೋಷ್ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಗಣಿ ಕಂಪನಿಯ ವಿವಿಧ ಇಲಾಖೆಯ ಅಧಿಕಾರಿಗಳಾದ ವಿಶ್ವನಾಥ ನಾಯಕ, ಜಗನ್ ಮೋಗನ್, ರಮೇಶ, ಸುರೇಶ, ವಿಜಯಕುಮಾರ ಶೆಟ್ಟಿ, ಚಂದ್ರಶೇಖರ ಬಾಗೂರು, ಹಟ್ಟಿ ಠಾಣೆಯ ಪಿಐ ಹೊಸಕೆರಪ್ಪ, ಕಾರ್ಮಿಕ ಮುಖಂಡರಾದ ತಿಪ್ಪಣ್ಣ, ಯಂಕೋಬ ಮಿಯ್ಯಾಪೂರ, ಪೆಚ್ಚಲಮ್ಮ ಇದ್ದರು.

ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ: ಶರಣಪ್ರಕಾಶ ಪಾಟೀಲ

ರಾಯಚೂರು: ‘ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ರಾಯಚೂರು ಉತ್ಸವ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಇಲ್ಲಿಯ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

‘ರಾಯಚೂರು ಉತ್ಸವ ನಡೆಸಬೇಕು ಎನ್ನುವ ಬೇಡಿಕೆ ಇದೆ. ಜಿಲ್ಲೆಯ ಕಲಾವಿದರೂ ಉತ್ಸುಕರಾಗಿದ್ದಾರೆ. ಸಿದ್ಧತೆ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ‘ ಎಂದು ತಿಳಿಸಿದರು.

‘ಕಲ್ಯಾಣ ಕರ್ನಾಟಕದ ಉತ್ಸವ ಕೇವಲ ಕಲಬುರ್ಗಿಗೆ ಸೀಮಿತವಾಗಬಾರದು. ಮುಖ್ಯಮಂತ್ರಿ ಅವರು ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಲ್ಲೂ ಪ್ರತಿ ವರ್ಷ ಸರತಿಯಂತೆ ಧ್ವಜಾರೋಹಣ ಮಾಡಬೇಕು ಎನ್ನುವ ಬೇಡಿಕೆ ಇದೆ. ಈ ವಿಷಯವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು‘ ಎಂದು ಹೇಳಿದರು.

ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ನಿಲ್ಲಿಸಲಿ: ‘ಕೃಷ್ಣಾ ನ್ಯಾಯಾಧೀಕರಣ-2ರ ಆದೇಶದಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಲು ಕರ್ನಾಟಕಕ್ಕೆ ಹಕ್ಕು ಇದೆ. ಈ ನಿರ್ಧಾರವನ್ನು 2013 ರಲ್ಲಿ ನ್ಯಾಯಾಧೀಕರಣ-2ರ ತೀರ್ಪಿನಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರಿ 75 ಸಾವಿರ ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನಿರ್ಧಿರಿಸಿ ರೈತರಿಗೆ ನ್ಯಾಯಯುತವಾದ ಪರಿಹಾರ ಒದಗಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಕೇಂದ್ರ ಸರ್ಕಾರ ರಾಜಕೀಯ ಮಾಡುವುದನ್ನು ಬಿಟ್ಟು ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಬೇಕು’ ಎಂದು ಸಚಿವರು ಒತ್ತಾಯಿಸಿದರು.

‘ನೀರಾವರಿ ಯೋಜನೆಗೆ ₹ 70 ಸಾವಿರ ಕೋಟಿ ಬೇಕಾಗಬಹುದು. ನಾಲ್ಕು ವರ್ಷಗಳ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಿಎಂ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.