
ರಾಯಚೂರು: ನಗರದ ವಿವಿಧ ಸಂಘ ಸಂಸ್ಥೆಗಳ ಕಚೇರಿ, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳಲ್ಲಿ ಶನಿವಾರ ದಾಸಶ್ರೇಷ್ಠ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಂತಕವಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ನಗರದ ಗಂಜ್ ವೃತ್ತದ ಬಳಿಯ ಕನಕದಾಸರ ಪುತ್ಥಳಿಗೆ ವಿವಿಧ ರಾಜಕೀಯ ಮುಂಡರು ಹಾಗೂ ಸಮಾಜದ ಗಣ್ಯರು ಪುಷ್ಪ ಸಮರ್ಪಣೆ ಮಾಡಿದರು.
ನಗರದ ಗಂಜ್ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಚಂದ್ರಮೌಳೇಶ್ವರ ವೃತ್ತ, ಗಾಂಧಿ ವೃತ್ತ, ಟಿಪ್ಪು ಸುಲ್ತಾನ ವೃತ್ತ, ಬಸವೇಶ್ವರ ವೃತ್ತ, ಸ್ಟೇಷನ್ ರಸ್ತೆಯ ಮಾರ್ಗವಾಗಿ ಸಾಗಿ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದ ಆಚರಣಕ್ಕೆ ಬಂದಿತು. ಹಳದಿ ಸೀರೆ ತೊಟ್ಟ ಮಹಿಳೆಯರು ಹಳದಿ ಪೇಟಾ ಧರಿಸಿದ್ದ ಯುವಕರು ಹಾಗೂ 100ಕ್ಕೂ ಹೆಚ್ಚು ಡೊಳ್ಳು ಕಲಾವಿದರು ಮೆರವಣಿಗೆಗೆ ಮೆರುಗು ತುಂಬಿದರು.
ಸಣ್ಣ ನೀರವಾರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ‘ಕನಕದಾಸರು ಜಾತಿ, ಮತ, ಪಂಥ ಎಂದು ಹೊಡೆದಾಡದಿರಿ. ಇರುವುದೊಂದೇ ಮಾನವ ಪಥ ಎಂದು ತಮ್ಮ ಕೀರ್ತನೆಗಳ ಮೂಲಕ ನಾಡಿನಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಯ ಸಂದೇಶ ಸಾರಿದ ಮಹಾನ್ ಶ್ರೇಷ್ಠ ಸಂತ’ ಎಂದರು.
‘ಕನಕದಾಸರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ತಿಳಿಸಿದರು.
‘ದೇಶದ ಎಲ್ಲ ಶರಣರು, ಸಂತರು, ದಾರ್ಶನಿಕರು ಮತ್ತು ಸಮಾಜ ಸುಧಾರಕರ ತತ್ವ– ಸಿದ್ಧಾಂತ ಒಂದೇಯಾಗಿದೆ. ಸಮಾಜದಲ್ಲಿ ಸರ್ವರೂ ಶಾಂತಿ ಸೌಹಾರ್ಧತೆಯಿಂದ ಸುಖವಾಗಿ ಇರಬೇಕು‘ ಎಂದು ಹೇಳಿದರು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್, ನಗರ ಶಾಸಕ ಡಾ.ಶಿವರಾಜ ಎಸ್.ಪಾಟೀಲ, ವಿಧಾನ ಪರಿಷತ್ ಸದಸ್ಯ ವಸಂತಕುಮಾರ, ಮಹಾನಗರಪಾಲಿಕೆ ನರಸಮ್ಮ ಮಾಡಗಿರಿ, ಉಪ ಮೇಯರ್ ಜೆ.ಸಾಜೀದ್ ಸಮೀರ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ, ತಹಶೀಲ್ದಾರ್ ಸುರೇಶ ವರ್ಮಾ, ಹಾಲುಮತ ಸಮಾಜದ ಬಸವಂತಪ್ಪ, ಮುಖಂಡರಾದ ಮೊಹಮ್ಮದ್ ಶಾಲಾಂ, ಜಯಣ್ಣ ಕೆ., ಶಾಂತಪ್ಪ, ಅಮರೇಗೌಡ ಹಂಚಿನಾಳ, ಜಿ. ಶಿವಮೂರ್ತಿ, ರುದ್ರಪ್ಪ ಅಂಗಡಿ, ಯುಸೂಫ್ ಖಾನ್. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹಾಲುಮತ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರತಿಭಾವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ: ‘ಕನ್ನಡ ಹರಿದಾಸ ಪರಂಪರೆಯಲ್ಲಿ ಅಪಾರ ಕೊಡುಗೆ ನೀಡಿದ ದಾಸಶ್ರೇಷ್ಠರೆಂದು ಖ್ಯಾತಿ ಪಡೆದ ಕನಕದಾಸರು ಅವರ ಜೀವನ ಬದ್ಧತೆ, ಕೀರ್ತನೆಗಳು, ಚಿಂತನೆಗಳು, ಕಾವ್ಯಗಳ ಮೂಲಕ ಜಗತ್ತಿಗೆ ಸಾರ್ವಕಾಲಿಕ ಮೌಲ್ಯಗಳನ್ನು ಸಾರಿದ್ದಾರೆ’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಯದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ನಿಕಾಯ ಡೀನರಾದ ಪ್ರೊ.ಪಾರ್ವತಿ ಸಿ.ಎಸ್, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬಿರಾದಾರ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕ ಅನಿಲ್ ಅಪ್ರಾಳ್ ಸ್ವಾಗತಿಸಿದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ: ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಎಂ. ಹನುಮಂತಪ್ಪ ಅವರು ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ ಡಿ., ಮಲ್ಲೇಶ ಕೋಲಿಮಿ, ಡೀನ್ ಎಂ. ಎಸ್. ಅಯ್ಯನ್‍ಗೌಡ, ಯು. ಸತೀಶ್‍ಕುಮಾರ ಉಪಸ್ಥಿತರಿದ್ದರು.
ಅಮರೇಶ್ ಆಶಿಹಾಳ ನಿರೂಪಿಸಿದರು. ರಾಜಣ್ಣ ಸ್ವಾಗತಿಸಿದರು. ಡಾ. ಶರಣಗೌಡ ಹಿರೇಗೌಡರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.