ADVERTISEMENT

ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸೋಣ

ಕನ್ನಡ ರಾಜ್ಯೋತ್ಸವ: ಜಿಲ್ಲಾಧಿಕಾರಿಯಿಂದ ರಾಷ್ಟ್ರಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 13:09 IST
Last Updated 1 ನವೆಂಬರ್ 2021, 13:09 IST
ರಾಯಚೂರಿನ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ಅವರು ರಾಷ್ಟ್ರಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು
ರಾಯಚೂರಿನ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಅವಿನಾಶ್‌ ಮೆನನ್‌ ಅವರು ರಾಷ್ಟ್ರಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು   

ರಾಯಚೂರು: ಜಿಲ್ಲೆಯ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯೂ ಸೇರಿದಂತೆ ಸರ್ವಾಂಗೀಣ ಪ್ರಗತಿ ಸಾಧಿಸಲು ಎಲ್ಲರೂ ಕಂಕಣಬದ್ಧರಾಗಿ ಶ್ರಮಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸಮೃದ್ಧ ಹಾಗೂ ಸ್ವಾವಲಂಬಿ ನಾಡು ನಿರ್ಮಿಸಲು ಪಣ ತೊಡೋಣ ಎಂದು ನೂತನ ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್‌ ಕರೆ ನೀಡಿದರು.

ನಗರದ ಡಿ.ಎ.ಆರ್ ಪೊಲೀಸ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರೆವೇರಿಸಿ, ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ವೈಶಿಷ್ಟ್ಯಗಳಿಂದ ಕೂಡಿದೆ.ಅನೇಕ ಸುಪ್ರಸಿದ್ಧ ರಾಜಮನೆತನದವರು, ಧೀರರು ಈ ನಾಡಿನಲ್ಲಿ ಆಳ್ವಿಕೆ ನಡೆಸಿ ಅನೇಕ ಅಮೂಲ್ಯ ಮತ್ತು ಜನಪರವಾದ ಕೊಡುಗೆಗಳನ್ನು ನೀಡಿದ್ದಾರೆ. ಭಾವೈಕ್ಯತೆ ಸ್ವರ್ಗವಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ ಎಂದರು.

ADVERTISEMENT

ಕನ್ನಡ ನುಡಿ, ಸಾಹಿತ್ಯ ಹಾಗೂ ಏಕೀಕರಣದ ಚಳವಳಿಗೆ ರಾಯಚೂರಿನ ಕೊಡುಗೆ ಸ್ಮರಣೀಯವಾಗಿದೆ. ಕನ್ನಡ ಭಾಷೆಯನ್ನು ಈ ಭಾಗದ ದಾಸರು, ಸಾಹಿತಿಗಳು, ವಚನಕಾರರು, ಜನಪದರು ಶ್ರೀಮಂತಗೊಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ, ನರಸಿಂಹಲು ವಡವಾಟಿ, ಗಜಲ್ ಗುಂಡಮ್ಮ, ಪಂಡಿತ್ ಮಾಣಿಕರಾವ್ ರಾಯಚೂರಕರ್, ಚನ್ನಬಸಪ್ಪ ಬೆಟ್ಟದೂರು, ಶಂಕರಗೌಡ ಬೆಟ್ಟದೂರು ಸೇರಿದಂತೆ ಹಲವರು ಈ ನೆಲದ ಪರಂಪರೆಯನ್ನು ಗಟ್ಟಿಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಕೆಲವು ಅನ್ಯ ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದೆ. ಇಂದಿನ ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವಜನಾಂಗದಲ್ಲಿ ಮತ್ತು ಮಕ್ಕಳಲ್ಲಿ ಇನ್ನಷ್ಟು ಪ್ರೀತಿ ಮತ್ತು ಕಾಳಜಿ ಮೂಡುವಂತೆ ಎಲ್ಲರೂ ಪಾಲಕರು ಗಮನಹರಿಸಬೇಕು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 13 ಸಾಧಕರಿಗೆ ಜಿಲ್ಲಾಧಿಕಾರಿಯು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ನಗರಸಭೆಯ ಅಧ್ಯಕ್ಷ ಈ.ವಿನಯಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್,ಬಿ. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯಕ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಶಿಕ್ಷಕ ದಂಡಪ್ಪ ಬಿರದಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.