ADVERTISEMENT

ರಾಯಚೂರು: ಯೋಧರ ತವರಿನಲ್ಲಿ ಅಕ್ಷರ ಜಾತ್ರೆ

ನೀರಮಾನ್ವಿ; ನಾಳೆ 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 6:56 IST
Last Updated 27 ಫೆಬ್ರುವರಿ 2026, 6:56 IST
ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸಿದ್ಧಗೊಳುತ್ತಿರುವ ಬೃಹತ್ ವೇದಿಕೆ
ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಸಿದ್ಧಗೊಳುತ್ತಿರುವ ಬೃಹತ್ ವೇದಿಕೆ   

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದ ಸಿದ್ಧಾರೂಢ ಮಠದ ಆವರಣದಲ್ಲಿ ಫೆ.28ರಂದು 11ನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ನೀರಮಾನ್ವಿ ಗ್ರಾಮ ಇದುವರೆಗೆ ದೇಶದ ಸೈನ್ಯಕ್ಕೆ 17 ಯೋಧರನ್ನು ನೀಡಿರುವ ಯೋಧರ ತವರೂರು ಆಗಿದೆ. ಪ್ರಸ್ತುತ ಒಬ್ಬ ಯುವತಿ ಸೇರಿದಂತೆ 14 ಜನ ಯುವಕರು ದೇಶದ ರಕ್ಷಣೆ ಹಾಗೂ ಗಡಿಕಾಯುವ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗ್ರಾಮವು ಧಾರ್ಮಿಕ ಹಾಗೂ ಸಾಹಿತ್ಯ ಪರಂಪರೆಯನ್ನು ಕೂಡ ಹೊಂದಿದೆ.

ನಾಡಿನ ಮಹತ್ವದ ಕತೆಗಾರ ಎಂದು ಗುರುತಿಸಲ್ಪಡುವ ದಿವಂಗತ ರಾಜಶೇಖರ ನೀರಮಾನ್ವಿ ಅವರ ಹುಟ್ಟೂರು. 

ADVERTISEMENT

ಸಿದ್ಧತೆ: ಸಿದ್ಧಾರೂಢ ಮಠದ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಗ್ರಾಮದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಕನ್ನಡ ಧ್ವಜಗಳನ್ನು ಕಟ್ಟಲಾಗಿದೆ.

ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ, 1,500 ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ ತಿಳಿಸಿದ್ದಾರೆ.

ವೈಚಾರಿಕ ಚಿಂತನೆಯ ಲೇಖಕ ಡಾ.ಬಸವಪ್ರಭು ಪಾಟೀಲ: 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಟ್ಟಣದ ಹಿರಿಯ ಸಾಹಿತಿ ಹಾಗೂ ವೈದ್ಯ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡಿರುವ ಲೇಖಕ.

ಅವರ ತಂದೆ ಚನ್ನಬಸವಪ್ಪ ಬೆಟ್ಟದೂರು ರೈತ ಹೋರಾಟಗಾರ ಹಾಗೂ ಸಾಹಿತಿ ಆಗಿದ್ದರು. ಕುಟುಂಬದ ಸಾಹಿತ್ಯಿಕ ಪರಿಸರದಿಂದ ಪ್ರೇರಣೆಗೊಂಡಿದ್ದ ಬಸವಪ್ರಭು ಪಾಟೀಲ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕೃಷಿ ಆರಂಭಿಸಿದ್ದರು.

ಉತ್ತಮ ಸಂಘಟಕರೂ ಆಗಿರುವ ಬಸವಪ್ರಭು ಪಾಟೀಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಬಸವ ಕೇಂದ್ರ, ವೀರಶೈವ ಸಮಾಜ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದಾಗ ರಾಯಚೂರಿನಲ್ಲಿ‌ ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷತೆಯಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು.

ಬಸವಪ್ರಭು ಪಾಟೀಲ ಬೆಟ್ಟದೂರು ಅವರ ಕೃತಿಗಳು: ‘ಮಾತಾಡಿ ಹೆಣಗಳೇ’ (ಕವನ ಸಂಕಲನ), ‘ಇದೇನು ಕತೆ?’, ‌‘ಮನವೇ ಬೀಜ’ (ಲೇಖನಗಳ ಸಂಕಲನಗಳು), ‌‘ಬೆಳಗು’ (ನಾಟಕ), ‘ಯುರೋಪಿನಲ್ಲಿ’ ಮತ್ತು ‘ಬಸವನಾಡಿನಿಂದ ಮಂಡೇಲಾ ನಾಡಿಗೆ’ (ಪ್ರವಾಸ ಕಥನಗಳು), ‘ಸವಿಗಾಳು’ (ಚುಟುಕುಗಳ ಸಂಕಲನ), ‘ಮಾನವಿ’ (ಮಾನ್ವಿ ತಾಲ್ಲೂಕಿನ ಬಗ್ಗೆ ಪರಿಚಯ), ‘ಇಮಾಂಬೀ ಮತ್ತು ಇತರ ಕತೆಗಳು’ (ಕಥಾ ಸಂಕಲನ), ‘ರಾಯಗಡದ ರಾಣಿ’ ಹಾಗೂ ‘ಇಂದ್ರಿಯ ನಿಗ್ರಹ ಮಾಡಿದರೆ’ (ಕಾದಂಬರಿಗಳು).

ಸಹೋದರ, ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹಾಗೂ ಎಚ್‌. ಎಸ್.ಪಾಟೀಲ ಅವರೊಂದಿಗೆ ‘ಸಂಗಡಿಗರ ಸಮಿತಿ’ ಎಂಬ ಗ್ರಂಥವನ್ನು ಸಂಪಾದಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಕನ್ನಡ ನಾಡು ನುಡಿ ಜಾಗೃತಿಗಾಗಿ ಸಾಹಿತ್ಯ ಸಮ್ಮೇಳನದ ಆಯೋಜನೆ ಶ್ಲಾಘನೀಯ 
– ಜೆಲ್ಲಿ ಆಂಜನೇಯ, ನಿವೃತ್ತ ಯೋಧ ನೀರಮಾನ್ವಿ
ಜನಪ್ರತಿನಿಧಿಗಳು ಗ್ರಾಮಸ್ಥರ ಸಹಕಾರದಿಂದ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು.
– ಶರಣಬಸವ ನೀರಮಾನ್ವಿ, ಅಧ್ಯಕ್ಷ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.