ADVERTISEMENT

ನಾಮಫಲಕದಲ್ಲಿ ನಿಯಮ ಉಲ್ಲಂಘಿಸಿದರೆ ಕಪ್ಪುಮಸಿ: ಕನ್ನಡಪರ ಸಂಘಟನೆಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:52 IST
Last Updated 18 ಅಕ್ಟೋಬರ್ 2025, 6:52 IST
ಸಿಂಧನೂರಿನ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಅರುಣ ಎಚ್.ದೇಸಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು
ಸಿಂಧನೂರಿನ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಅರುಣ ಎಚ್.ದೇಸಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ ನಡೆಯಿತು   

ಸಿಂಧನೂರು: ‘ಸರ್ಕಾರದ ಆದೇಶಾನುಸಾರ ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬರೆಯಿಸಬೇಕು. ನಿಯಮ ಉಲ್ಲಂಘಿಸುವ ಮಳಿಗೆಗಳ ಫಲಕಗಳಿಗೆ ಕಪ್ಪು ಮಸಿ ಬಳಿಯಲಾಗುವುದು’ ಎಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಗಳ ಮುಖಂಡರು ಮಾತನಾಡಿದರು.

‘ನಗರದ ಬಟ್ಟೆ ಅಂಗಡಿಗಳು ಹೋಟೆಲ್, ಶೋ ರೂಮ್, ಕಿರಾಣಿ ಅಂಗಡಿ, ಟ್ರೆಂಡ್ಸ್ ಸೇರಿದಂತೆ ಅಂಗಡಿ ಮುಂಗಟ್ಟುಗಳು ನಿಯಮ ಉಲ್ಲಂಘಿಸಿದರೆ ಮಸಿ ಬಳೆಯಲಾಗುವುದು’ ಎಂದು ಒಕ್ಕೊರಲಿನಿಂದ ಹೇಳಿದರು.

ADVERTISEMENT

ತಹಶೀಲ್ದಾರ್ ಅರುಣ ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‌‘ಕನ್ನಡ ಪರ ಸಂಘಟನೆಗಳ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.

‘ಕನ್ನಡ ಮಾಧ್ಯಮದಲ್ಲಿ ಅತಿಹೆಚ್ಚು ಅಂಕ ಪಡೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ, ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಧ್ವಜಾರೋಹಣದ ನಂತರ ತಾಯಿ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆ, ಟೌನ್‍ಹಾಲ್‍ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಅಂದು ಸರ್ಕಾರಿ ರಜೆ ಇದ್ದು, ಸರ್ಕಾರಿ, ಅನುದಾನ, ಅನುದಾನ ರಹಿತ, ಖಾಸಗಿ ಶಾಲಾ ಸಂಸ್ಥೆಗಳು ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಹೇಳಿದರು.

ತಾ.ಪಂ ಇಒ ಚಂದ್ರಶೇಖರ, ಹಿಂದುಳಿದ ವರ್ಗಗಳ ಅಧಿಕಾರಿ ಲಿಂಗಪ್ಪ ಅಂಗಡಿ, ಕಸಾಪ ಅಧ್ಯಕ್ಷ ಎಚ್.ಎಫ್. ಮಸ್ಕಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಗಂಗಣ್ಣ ಡಿಶ, ಲಕ್ಷ್ಮಿ ಪತ್ತಾರ, ವೀರೇಶ ಭಾವಿಮನಿ, ಉಮೇಶಗೌಡ ಅರಳಹಳ್ಳಿ, ರಾಮಕೃಷ್ಣ ಭಜಂತ್ರಿ, ಮಂಜುನಾಥ ಗಾಣಿಗೇರ, ಮೌನೇಶ ದೊರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.