ADVERTISEMENT

ರಾಯಚೂರು: ಬಿಜೆಪಿಗೆ ಪ್ರಬಲ ಎದುರಾಳಿಯಾದ ಜೆಡಿಎಸ್‌

ನಾಗರಾಜ ಚಿನಗುಂಡಿ
Published 2 ಫೆಬ್ರುವರಿ 2023, 20:30 IST
Last Updated 2 ಫೆಬ್ರುವರಿ 2023, 20:30 IST
ದೇವದುರ್ಗ ವಿಧಾನಸಭೆ ಕ್ಷೇತ್ರ
ದೇವದುರ್ಗ ವಿಧಾನಸಭೆ ಕ್ಷೇತ್ರ   

ರಾಯಚೂರು: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕ ಪ್ರಾಬಲ್ಯ ಹೊಂದಿದ್ದಾರೆ. ಆದರೆ, 2018 ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕರಿಯಮ್ಮ ಸೋಲು ಅನುಭವಿಸಿದ ದಿನದಿಂದ ಇಂದಿನವರೆಗೂ ಜನಬೆಂಬಲ ಕೋರುತ್ತಾ ಬಂದಿದ್ದು, ಬಿಜೆಪಿಗೆ ಪ್ರಬಲ ಎದುರಾಳಿಯಾಗಿ ಗಮನ ಸೆಳೆಯುತ್ತಿದ್ದಾರೆ.

ಬಿಜೆಪಿಯಿಂದ ಕೆ.ಶಿವನಗೌಡ ನಾಯಕ ಸ್ಪರ್ಧಿಸುವುದು ಖಚಿತ. ಕ್ಷೇತ್ರದಾದ್ಯಂತ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಅನುದಾನ ತಂದಿರುವುದು ಹಾಗೂ ಕೋವಿಡ್‌ ಮಹಾಮಾರಿ ಆವರಿಸಿದ್ದ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೆ ಆಹಾರದ ಪ್ಯಾಕೆಟ್‌ಗಳನ್ನು ತಿಂಗಳುಗಟ್ಟಲೆ ಹಂಚಿದ ಜನಪರ ಕೆಲಸಗಳು ಜನರಿಗೆ ಗೊತ್ತಿದೆ. ಹಿಂದುಳಿದ ತಾಲ್ಲೂಕನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಜನರು ಮತ್ತೊಮ್ಮೆ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸ ಶಿವನಗೌಡ ಅವರಲ್ಲಿದೆ. ಅರಕೇರಾ ಗ್ರಾಮವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಮಾಡಿದ್ದನ್ನು ಜನರು ನೋಡಿದ್ದಾರೆ. ಹೀಗಾಗಿ ಪ್ರಬಲರನ್ನೇ ಜನರು ಆಯ್ಕೆ ಮಾಡುತ್ತಾರೆ. ಕ್ಷೇತ್ರದಾದ್ಯಂತ ಧಾರ್ಮಿಕ ಕಾರ್ಯಗಳಿಗೆ, ಆಪತ್ತುಗಳಿಗೆ ನೆರವು ಒದಗಿಸುತ್ತಾ ಬಂದಿರುವುದರಿಂದ ಜನ ಕೈ ಬಿಡುವುದಿಲ್ಲ ಎನ್ನುವ ಅಚಲ ನಂಬಿಕೆ ಅವರಲ್ಲಿ ಮನೆಮಾಡಿದೆ.

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈಗಾಗಲೇ ಕರಿಯಮ್ಮ ಅವರಿಗೆ ಟಿಕೆಟ್‌ ನೀಡುವುದನ್ನು ಖಚಿತಪಡಿಸಿದ್ದಾರೆ. ಇತ್ತಿಚೆಗೆ ನಡೆಸಿದ ಪಂಚರತ್ನ ರಥಯಾತ್ರೆಗೆ ಕ್ಷೇತ್ರಯಾದ್ಯಂತ ದೊರೆತ ಅಭೂತಪೂರ್ವ ಸ್ಪಂದನೆ ಹಾಗೂ ಜನರು ವ್ಯಕ್ತಪಸಿದ ಮಾತುಗಳನ್ನು ಕೇಳಿದರೆ ಕರಿಯಮ್ಮ ಅವರು ಗೆಲುವಿನ ಬಾಗಿಲಲ್ಲಿ ನಿಂತಿರುವಂತಿದೆ. ತಾಲ್ಲೂಕು ಅಭಿವೃದ್ಧಿಗೆ ಜೆಡಿಎಸ್‌ ನೀಡಿರುವ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಅವರು ನಿರಂತರ ಮಾಡುತ್ತಿದ್ದಾರೆ. ಹಾಲಿ ಶಾಸಕರ ವಿರುದ್ಧ ಧ್ವನಿ ಎತ್ತುತ್ತಾ ಬರುತ್ತಿದ್ದಾರೆ. ಎರಡು ಬಾರಿ ಸೋತರೂ ಮನೆಯಲ್ಲಿ ಕುಳಿತಿಲ್ಲ ಎನ್ನುವ ಮಾತು ಜನರ ಬಾಯಲ್ಲಿದೆ. ಇಂಥ ಮಾತುಗಳೇ ಮತಗಳಾಗಿ ಪರಿವರ್ತನೆ ಆಗುತ್ತವೆ ಎನ್ನುವುದು ಕರಿಯಮ್ಮ ಅವರಿಗೆ ವಿಶ್ವಾಸ. ಎದುರಾಳಿಗಳು ಪ್ರದರ್ಶಿಸುವ ವಿವಿಧ ಬಲಗಳಿಗೆ ಕರಿಯಮ್ಮ ಹೇಗೆ ಪ್ರತ್ಯುತ್ತರ ನೀಡುತ್ತಾರೆ ಎಂಬುದರ ಮೇಲೆ ಗೆಲುವು ಅವಲಂಬಿಸಿದೆ.

ADVERTISEMENT

ಕಾಂಗ್ರೆಸ್‌ ಟಿಕೆಟ್‌ಗಾಗಿ ಒಂದೇ ಮನೆತನದ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್‌ನಿಂದ ಅಂತಿಮವಾಗಿ ಯಾರು ಸ್ಪರ್ಧಿಸುತ್ತಾರೆ ಎಂಬುದನ್ನು ಆಧರಿಸಿ ಜನರು ಮತ ನೀಡಲಿದ್ದಾರೆ. 2016 ರ ಉಪಚುನಾವಣೆ ಮತ್ತು 2018 ರ ಚುನಾವಣೆಗಳಲ್ಲಿ ಸೋಲು ಅನುಭವಿಸಿರುವ ರಾಜಶೇಖರ್‌ ನಾಯಕ ಮತ್ತೆ ಟಿಕೆಟ್‌ ಕೇಳಿದರೂ, ಕ್ಷೇತ್ರದಾದ್ಯಂತ ಜನ ಸಂಪರ್ಕ ಸಭೆಗಳನ್ನು ಮಾಡುತ್ತಿರುವುದು ಶ್ರೀದೇವಿ ನಾಯಕ ಅವರು. ಮಾಜಿ ಸಂಸದ ಬಿ.ವಿ.ನಾಯಕ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಮತ್ತು ಬಿಜೆಪಿ ಪ್ರಬಲರ ವಿರುದ್ಧ ಜನರ ಒಲವು ಪಡೆಯುವುದಕ್ಕೆ ಯಾರೂ ಸೂಕ್ತ ಎನ್ನುವ ಚರ್ಚೆ ಕಾಂಗ್ರೆಸ್‌ನಲ್ಲಿ ಶುರುವಾಗಿದೆ. ಶ್ರೀದೇವಿ ನಾಯಕ ಅವರಿಗೇ ಟಿಕೆಟ್‌ ನೀಡುತ್ತಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಬಿ.ವಿ. ನಾಯಕ ಅವರ ನಿರ್ಧಾರವೇ ಅಂತಿಮವಾಗಲಿದ್ದು, ಇವರೇ ಕಾಂಗ್ರೆಸ್‌ ಅಭ್ಯರ್ಥಿಯಾದರೆ ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸವಾಲಾಗುವುದು ನಿಶ್ಚಿತ. ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಬಳಿಕವೇ ಸೋಲು–ಗೆಲುವಿನ ಲೆಕ್ಕಾಚಾರ ಶುರುವಾಗಲಿದೆ.

ದೇವದುರ್ಗ ಕ್ಷೇತ್ರದಲ್ಲಿಯೂ ಭಾರಿ ಪ್ರಮಾಣದ ತ್ರಿಕೋನ ಸ್ಪರ್ಧೆ ನಡೆಯುವ ಮುನ್ಸೂಚನೆಗಳಿವೆ. ಮತದಾರರು ಯಾವ ಬಲವನ್ನು ನೆಚ್ಚಿಕೊಳ್ಳುತ್ತಾರೆಂಬುದರ ಮೇಲೆ ಗೆಲುವು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.