ADVERTISEMENT

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ:ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಮಾಜಿ ಶಾಸಕರ ಚಿತ್ರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 16:02 IST
Last Updated 22 ಮಾರ್ಚ್ 2024, 16:02 IST
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಖಾಸಗಿ ಆಂಬುಲೆನ್ಸ್ ಮೇಲೆ ಮಾಜಿ ಶಾಸಕ ಕೆ ಶಿವನಗೌಡ ನಾಯಕ ಅವರ ಭಾವಚಿತ್ರ ಇರುವುದು.
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಖಾಸಗಿ ಆಂಬುಲೆನ್ಸ್ ಮೇಲೆ ಮಾಜಿ ಶಾಸಕ ಕೆ ಶಿವನಗೌಡ ನಾಯಕ ಅವರ ಭಾವಚಿತ್ರ ಇರುವುದು.   

ದೇವದುರ್ಗ: ಸ್ಥಳೀಯ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಅವರ ಭಾವಚಿತ್ರವಿರುವ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ ತಾಲ್ಲೂಕಿನಾದ್ಯಂತ ಸಂಚಾರ ನಡೆಸುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಮಾಜಿ ಶಾಸಕರ ಭಾವಚಿತ್ರವಿರುವ ಅರಕೇರಾ ಪಟ್ಟಣದ ಎಚ್‌.ಎ.ನಾಡಗೌಡ ಆಸ್ಪತ್ರೆಯ ಆಂಬುಲೆನ್ಸ್ ಗುರುವಾರ ಪಟ್ಟಣದ ಎಪಿಎಂಸಿ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ಕಂಡು ಬಂದಿದ್ದು, ಈ ಅಂಬ್ಯುಲೆನ್ಸ್‌ನ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪಟ್ಟಣದ ನಾಲ್ಕು ಕಡೆ ಇರುವ ಚೆಕ್‌ಪೋಸ್ಟ್‌ಗಳನ್ನು ದಾಟಿ ಹೇಗೆ ಪಟ್ಟಣವನ್ನು ಪ್ರವೇಶಿಸಿತು' ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪ್ರಶ್ನಿಸಿದ್ದಾರೆ.

ಮಾಜಿ ಶಾಸಕರ ಭಾವಚಿತ್ರವನ್ನು ತೆರವುಗೊಳಿಸದೇ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ. ಚುನಾವಣಾಧಿಕಾರಿಗಳು ಆಸ್ಪತ್ರೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಗುರುವಾರ ಕಂಡು ಬಂದ ಶಾಸಕ ಕೆ. ಶಿವನಗೌಡ ನಾಯಕ ಭಾವಚಿತ್ರ ಇರುವ ಆಂಬ್ಯುಲೆನ್ಸ್ ಅನ್ನು ಯಾರೂ ತಪಾಸಣೆ ಮಾಡಲಿಲ್ಲ. ಇದು ಅರಕೇರಾ ಎಚ್. ಎ.ನಾಡಗೌಡ ಆಸ್ಪತ್ರೆ ಅಂಬುಲೆನ್ಸ್. ಆದರೆ, ಸರ್ಕಾರಿ ವೈದ್ಯ ಡಾ.ಅಯ್ಯಣ್ಣ ಬಲ್ಲಟಗಿ ಒಡೆತನದ ಗುರು ಕ್ಲಿನಿಕ್ ಆಸ್ಪತ್ರೆಗೆ ಬಾಡಿಗೆ ಪಡೆದಿದ್ದಾರೆ. ಚುನಾವಣೆ ನೀತಿ ಸಂಹಿತೆ ಬಗ್ಗೆ ನನಗೆ ಗೊತ್ತಿಲ್ಲ‘ ಎಂದು ಅಂಬ್ಯುಲೆನ್ಸ್ ಚಾಲಕ ಶಂಭುಲಿಂಗ 'ಪ್ರಜಾವಾಣಿ'ಗೆ ತಿಳಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿಯೂ ಈ ಆಂಬ್ಯುಲೆನ್ಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪರಿಣಾಮ ಹಿಂದಿನ ಮತ್ತು ಇಂದಿನ ಚುನಾವಣೆ ಅಧಿಕಾರಿ ವಶಕ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು.

’ಆಂಬ್ಯುಲೆನ್ಸ್ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಇರುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ ವಾಹನ ವಶಕ್ಕೆ ಪಡೆಯಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ ನಾಯಕ ಎಲ್. ತಿಳಿಸಿದ್ದಾರೆ.

’ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳಿಗೆ ಸಭೆಗಳಲ್ಲಿ ತಿಳಿಸಲಾಗಿತ್ತು. ಅದು, ಹೇಗೆ ಉಲ್ಲಂಘಿಸಿದ್ದಾರೆ ಎಂದು ತಿಳಿದಿಲ್ಲ. ತಪ್ಪಿಸಸ್ಥರ ವಿರುದ್ಧ ದೂರು ದಾಖಲಿಸಿಕೊಂಡು ವಾಹನ ವಶಕ್ಕೆ ಪಡೆಯಲು ಸೂಚಿಸುವೆ’ ಎಂದು ಜಿಲ್ಲಾ ಚುನಾವಣಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ರಾಹುಲ್ ಪಾಡ್ವೆ ತಿಳಿಸಿದರು.

ಮಾರ್ಚ್ 16 ರಂದು ಲೋಕಸಭಾ ಚುನಾವಣಾ ನೀತಿ ಸಂಹಿತೆ ದೇಶದಾದ್ಯಂತ ಜಾರಿಯಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಂಬುಲೆನ್ಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ತಿಳಿಸುವೆ.
-ಚೇತನಕುಮಾರ, ದೇವದುರ್ಗ ಚುನಾವಣಾಧಿಕಾರಿ
ಚುನಾವಣಾ ಸಂದರ್ಭದಲ್ಲಿ ಅಧಿಕಾರಿಗಳು ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಇಂತಹ ಘಟನೆಗಳಿಂದ ಪ್ರಜಾಪ್ರಭುತ್ವದ ಮೇಲೆ ಜನರಿಗೆ ನಂಬಿಕೆ ಹೋಗುತ್ತದೆ. ಸಂಬಂಧಪಟ್ಟ ವೈದ್ಯ ಹಾಗೂ ಆಂಬುಲೆನ್ಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.
-ಬಸವರಾಜ ನಾಯಕ ಮಸ್ಕಿ, ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.