ADVERTISEMENT

ಮಸ್ಕಿ | ವಿಜಯೇಂದ್ರನ ದುಡ್ಡು ಪಡೆದು ಕಾಂಗ್ರೆಸ್‌ಗೆ ಮತ ನೀಡಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
ಮಸ್ಕಿ ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಗೂ ಪಕ್ಷದ ಮುಖಂಡರನ್ನು ಸಿಂಧನೂರು ತಾಲ್ಲೂಕು ತುರ್ವಿಹಾಳದಲ್ಲಿ ಬೆಂಬಲಿಗರು ಹೂಮಳೆ ಸುರಿಸಿ ಸ್ವಾಗತಿಸಿದರು
ಮಸ್ಕಿ ವಿಧಾನಸಭೆ ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹಾಗೂ ಪಕ್ಷದ ಮುಖಂಡರನ್ನು ಸಿಂಧನೂರು ತಾಲ್ಲೂಕು ತುರ್ವಿಹಾಳದಲ್ಲಿ ಬೆಂಬಲಿಗರು ಹೂಮಳೆ ಸುರಿಸಿ ಸ್ವಾಗತಿಸಿದರು   

ತುರ್ವಿಹಾಳ (ರಾಯಚೂರು ಜಿಲ್ಲೆ): ‘ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ದುಡ್ಡು ತೆಗೆದುಕೊಂಡು‌ ಬಂದಿದ್ದಾರೆ. ಅವರಿಂದ ದುಡ್ಡು ಪಡೆದುಕೊಂಡರೂ ಕಾಂಗ್ರೆಸ್‌ ಅಭ್ಯರ್ಥಿಗೇ ಮತಕೊಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರರಿಗೆ ಮನವಿ ಮಾಡಿದರು.

ಸೋಮವಾರ ಇಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ವಿಜಯೇಂದ್ರ ಶಾಸಕರೂ ಅಲ್ಲ, ಸಚಿವರೂ ಅಲ್ಲ. ಅವರ ಬಳಿ ಇರುವುದು ಜನರು ತೆರಿಗೆ ಕಟ್ಟಿರುವ ಹಣ’ ಎಂದರು.

‘ಸಂತೆಯಲ್ಲಿ ಜಾನುವಾರುಮಾರಾಟವಾದಂತೆ ಶಾಸಕರಾಗಿದ್ದ ಪ್ರತಾಪಗೌಡ ₹ 30 ಕೋಟಿ ಪಡೆದು ತಮ್ಮನ್ನು ತಾವು ಮಾರಾಟ ಮಾಡಿಕೊಂಡಿದ್ದಾರೆ.ಕ್ಷೇತ್ರದ ಮತದಾರರ ಗೌರವಕ್ಕೆ‌ಚ್ಯುತಿ ತಂದವರನ್ನು ಸಹಿಸಿಕೊಳ್ಳಬಾರದು’ ಎಂದರು.

ADVERTISEMENT

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಅನೈತಿಕ ರಾಜಕಾರಣ ಮಾಡುತ್ತಿರುವ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲು ಬಸನಗೌಡ ತುರ್ವಿಹಾಳ ಅವರನ್ನು ಆಯ್ಕೆ ಮಾಡಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ‌ಬಸನಗೌಡ ತುರ್ವಿಹಾಳ, ಅಮರೇಗೌಡ ಬಯ್ಯಾಪುರ ಮಾತನಾಡಿದರು.

‘ಹೂಮಳೆ’ಯಸ್ವಾಗತ: ಮಸ್ಕಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಿಂಧನೂರು ತಾಲ್ಲೂಕಿನ ಗ್ರಾಮಗಳಿಗೆ ಸೋಮವಾರ ಉಪಚುನಾವಣೆ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್‌ ನಾಯಕರನ್ನು ಬೆಂಬಲಿಗರು ಭಾರಿ ಪ್ರಮಾಣದಲ್ಲಿ ಹೂವುಗಳನ್ನು ಸುರಿಸಿ, ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.

ಸಿಂಧನೂರು– ಕುಷ್ಟಗಿ ಮಾರ್ಗದಲ್ಲಿರುವ ಉಮಲೂಟಿ, ಕಲಮಂಗಿ, ತುರ್ವಿಹಾಳ, ಗುಂಜಳ್ಳಿ, ವಿರೂಪಾಪುರ ಹಾಗೂ ಗೌಡನಬಾವಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ನಿಂತುಕೊಂಡಿದ್ದರು.ತುರ್ವಿಹಾಳ ಪಟ್ಟಣದಲ್ಲಿ ಜೆಸಿಬಿ ಯಂತ್ರದ ನೆರವಿನೊಂದಿಗೆ ‘ಹೂಮಳೆ‘ ಸುರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.