ಜಾಲಹಳ್ಳಿ: ಸಮೀಪದ ಆಲ್ಕೋಡ್ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಬುಧವಾರ ತಯಾರಿಸಲಾಗಿದ್ದ ಸಾಂಬಾರು ಸೇವಿಸಿ ಅಡುಗೆ ಸಿಬ್ಬಂದಿ ವಿಜಯಲಕ್ಷ್ಮಿ ಅಸ್ವಸ್ಥಗೊಂಡ ಘಟನೆ ಬುಧವಾರ ನಡೆದಿದೆ.
ಬೆಳಿಗ್ಗೆ ವಿದ್ಯಾರ್ಥಿಗಳಿಗೆ ಉಪಾಹಾರ ಸಿದ್ಧಪಡಿಸಿ ಬಡಿಸಿ ನಂತರ ಮಧ್ಯಾಹ್ನದ ಊಟಕ್ಕಾಗಿ ಅನ್ನ ಹಾಗೂ ಸಾಂಬರು ಸಿದ್ಧಪಡಿಸಲಾಗಿತ್ತು. ಸಿಬ್ಬಂದಿ ವಿಜಯಲಕ್ಷ್ಮಿ ಅವರು ಸಾಂಬಾರಿನ ಬಣ್ಣ ಬದಲಾಗಿರುವುದನ್ನು ಗಮನಿಸಿ ರುಚಿ ನೋಡಲು ಅದನ್ನು ಸೇವಿಸಿದ್ದಾರೆ. ಬಳಿಕ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಮೇಲ್ವಿಚಾರಕಿ ಅಂಜನಾದೇವಿ ಗಮನಕ್ಕೆ ತರಲಾಗಿದೆ. ಅವರು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸುಮಾರು 100 ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ತಪ್ಪಿದಂತಾಗಿದೆ.
ವಿಷಯ ತಿಳಿದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎನ್.ಬಡಿಗೇರ, ಜಿಲ್ಲಾ ಸಮನ್ವಯಾಧಿಕಾರಿ ಆರ್.ಇಂದಿರಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸುಖದೇವ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹಟ್ಟಿ, ಪಿಎಸ್ಐ ವೈಶಾಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
‘ಒಂದು ವರ್ಷದಿಂದ ಈ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಹಾಗೂ ಸಹ ಶಿಕ್ಷಕರ ಮಧ್ಯೆ ವೈಮನಸ್ಸಿರುವುದು ಇಲಾಖೆಯ ಗಮನಕ್ಕಿದೆ. ತಕ್ಷಣವೇ ಈ ಘಟನೆಯ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ಪರಿಶೀಲಿಸಬೇಕು. ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.