ADVERTISEMENT

18 ರಂದು ಮಂಜರ್ಲಾದಲ್ಲಿ ತತ್ವಪದಕಾರ ಖಾದರವಲಿ ಆರಾಧನೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 13:25 IST
Last Updated 14 ಮೇ 2019, 13:25 IST

ರಾಯಚೂರು: ತಾಲ್ಲೂಕಿನ ಮಂಜರ್ಲಾ ಗ್ರಾಮದಲ್ಲಿ ಖಾದರ ವಲಿ ಪ್ರಭುಗಳ ಆರಾಧನೆ(ಉರುಸ್) ಮೇ 18ರಂದು ನೆರವೇರಲಿದೆ ಎಂದು ಪತ್ರಕರ್ತ ಕೆ.ಎನ್ ರೆಡ್ಡಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಹಮ್ಮದಿ ಕುಟುಂಬದಲ್ಲಿ ಜನಿಸಿದ್ದ ಖಾದರವಲಿ ಅವರು ಶಿವನ ಆರಾಧಕರಾಗಿದ್ದರು. ಸಿದ್ದರಾಮ ಸ್ವಾಮಿ ಎನ್ನುವವರ ಮಾರ್ಗದರ್ಶನದಲ್ಲಿ ಬೆಳೆದಿದ್ದು ವಿಶೇಷ. ಆಧ್ಯಾತ್ಮಿಕ ಚಿಂತಕರಾಗಿದ್ದ ಖಾದರವಲಿ ಅವರು ಕನ್ನಡ, ಉರ್ದು ಹಾಗೂ ತೆಲಗು ಭಾಷೆಯಲ್ಲಿ ಸುಮಾರು 1,500 ಕ್ಕೂ ಹೆಚ್ಚು ತತ್ವ ಪದಗಳನ್ನು ರಚನೆ ಮಾಡಿದ್ದಾರೆ. ಎಲ್ಲ ಸಮುದಾಯದವರು ಅವರನ್ನು ಪ್ರೀತಿಯಿಂದ ಕಾಣುತ್ತಿದ್ದರು ಎಂದು ಹೇಳಿದರು.

1932ರಲ್ಲಿ ಖಾದರವಲಿಯವರು ತಾಲ್ಲೂಕಿನ ಮಂಜರ್ಲಾ ಗ್ರಾಮದಲ್ಲಿ ಜನಿಸಿದರು. ಭಾವೈಕ್ಯತೆ ವಾತಾವರಣವನ್ನು ಸೃಷ್ಟಿಸಿದ್ದಾರೆ. 10ನೇ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿ ಪೂರ್ಣಗೊಳಿಸಿದ್ದ ಅವರು ಪುಣಾದ ಬಾಲಗಂಗಾಧರ ತಿಲಕ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದುಕೊಂಡಿದ್ದರು ಎಂದು ವಿವರಿಸಿದರು.

ADVERTISEMENT

ಪ್ರತಿ ವರ್ಷ ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಅಂತವರ ಪುತ್ರರಾದ ದಾದಾಪೀರ್ ಮಂಜರ್ಲಾ ಅವರು ಸಹ ತತ್ವ ಪದ ರಚನೆ, ಗಾಯನ, ಸಾಧನೆ ಮಾಡಿದ್ದಾರೆ. ಅವರಿಂದ 149 ರಿಕಾರ್ಡಿಂಗ್‌ ಕ್ಯಾಸೆಟ್‌ಗಳು ಹೊರಬಂದಿವೆ ಎಂದು ತಿಳಿಸಿದರು.

ಎಲ್ಲ ಸಮುದಾಯವನ್ನೊಳಗೊಂಡ ಇಂಥ ಆಧ್ಯಾತ್ಮಿಕ ಚಿಂತಕ ಖಾದರ ಟ್ರಸ್ಟ್‌ಗೆ ಜಿಲ್ಲಾಡಳಿತ ನೆರವು ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತತ್ವಪದ ಖ್ಯಾತ ಗಾಯಕ ದಾದಾಪೀರ್ ಮಂಜರ್ಲಾ ಮಾತನಾಡಿ, ಆರಾಧನೆ ನಿಮಿತ್ತ ಅಹೋರಾತ್ರಿ ಸಂಗೀತ, ಪ್ರವಚನ ಜರುಗಲಿದ್ದು, ಕೋಲ್ಕತ್ತಾದ ಉಸ್ತಾದ ರಶೀದ ಖಾನ್ ಅವರ ಶಿಷ್ಯರಾದ ಪಂಡಿತ್ ಆಶಿಶ್ ಚಕ್ರವರ್ತಿ ಹಾಗೂ ಪಂಡಿತ ನಿರಂಜನ್ ಬೋಸ್ ತಬಲ ವಾದನದೊಂದಿಗೆ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

18 ರಂದು ಸಂಜೆ 7:30 ಕ್ಕೆ ಖಾದರವಲಿಯವರ ಪೀಠಕ್ಕೆ ಅವರ ಪುತ್ರರಾದ ದಾದಾಪೀರ್ ಮಂಜರ್ಲಾ, ಚಾಂದಪೀರ, ಹುಸೇನ್ ಪೀರ್ ಅವರ ಅಧ್ಯಕ್ಷತೆಯಲ್ಲಿ ಗಂಧದ ಮೆರವಣಿಗೆ ನಡೆಯಲಿದೆ. ಬಳಿಕ ಮಹಾಮಂಗಳಾರತಿ ಸೇವೆಯನ್ನು ಮಾಡಲಾಗುವುದು. ಯಾವುದೇ ಉರುಸ್‌ಗಳಲ್ಲಿ ಗಂಧದ ಮೆರವಣಿಗೆ ನೆರವೇರಿಸಲಾಗುತ್ತದೆ. ಆದರೆ, ಖಾದರವಲಿಯವರ ಉರುಸ್‌ನಲ್ಲಿ ಮಹಾಮಂಗಳಾರತಿ ಸೇವೆ ನಡೆಸುವುದು ಅತ್ಯಂತ ವಿಶೇಷದ ಸಂಗತಿಯಾಗಿದೆ ಎಂದು ಹೇಳಿದರು

ಹುಸೇನ್ ಪೀರ್, ಚಾಂದ್ ಪೀರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.