ADVERTISEMENT

ರಾಯಚೂರು: ಉದ್ದಿಮೆಗಳಿಲ್ಲದೆ ಹಿಂದುಳಿದ ದೇವದುರ್ಗ! 

ಕೈಗಾರಿಕಾ ವಲಯಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಬೆಳೆದ ಮುಳ್ಳಿನ ಪೊದೆಗಳು

ನಾಗರಾಜ ಚಿನಗುಂಡಿ
Published 21 ಸೆಪ್ಟೆಂಬರ್ 2022, 19:30 IST
Last Updated 21 ಸೆಪ್ಟೆಂಬರ್ 2022, 19:30 IST
ದೇವದುರ್ಗ ಪಟ್ಟಣದಿಂದ ಜಾಲಹಳ್ಳಿ ಮಾರ್ಗದಲ್ಲಿ ಕೆಐಎಡಿಬಿ ವಶದಲ್ಲಿರುವ ಜಾಗದಲ್ಲಿ ಅಭಿವೃದ್ಧಿಯಿಲ್ಲದೆ ಗಿಡಗಂಟಿಗಳು ಬೆಳೆದಿವೆ.
ದೇವದುರ್ಗ ಪಟ್ಟಣದಿಂದ ಜಾಲಹಳ್ಳಿ ಮಾರ್ಗದಲ್ಲಿ ಕೆಐಎಡಿಬಿ ವಶದಲ್ಲಿರುವ ಜಾಗದಲ್ಲಿ ಅಭಿವೃದ್ಧಿಯಿಲ್ಲದೆ ಗಿಡಗಂಟಿಗಳು ಬೆಳೆದಿವೆ.   

ರಾಯಚೂರು: ದೇವದುರ್ಗ ತಾಲ್ಲೂಕು ಕೇಂದ್ರದಲ್ಲಿ ಇದುವರೆಗೂ ಕೈಗಾರಿಕಾ ವಲಯ ಅಭಿವೃದ್ಧಿಗೊಳಿಸಿ ಉದ್ದಿಮೆಗಳನ್ನು ಆರಂಭಿಸಲು ಅವಕಾಶ ಮಾಡಿಲ್ಲ!

ಯಾವುದೇ ಪ್ರದೇಶ ಅಭಿವೃದ್ಧಿ ಆಗುವುದಕ್ಕೆ ಉದ್ದಿಮೆಗಳು ಉದ್ಯೋಗ ಸೃಷ್ಟಿಗೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಜೀವನಾಡಿ ಇದ್ದಂತೆ ಎನ್ನುವುದು ಅರ್ಥಶಾಸ್ತ್ರದ ಸಿದ್ಧಾಂತ. ದೇವದುರ್ಗವನ್ನು ನಿಜಕ್ಕೂ ಅಭಿವೃದ್ಧಿ ಮಾಡುವ ಕಾಳಜಿ ಇದ್ದರೆ, ಸಣ್ಣಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಕೈಗಾರಿಕಾ ವಲಯವೊಂದನ್ನು ಅಭಿವೃದ್ಧಿ ಪಡಿಸುವ ತುರ್ತು ಅಗತ್ಯವಿದೆ ಎನ್ನುವುದು ಪ್ರಗತಿಪರರು ಒತ್ತಾಯಿಸುತ್ತಿದ್ದಾರೆ.

ಕೈಗಾರಿಕಾ ವಲಯ ಅಭಿವೃದ್ಧಿಗಾಗಿ ದೇವದುರ್ಗ ಪಟ್ಟಣದಿಂದ ಜಾಲಹಳ್ಳಿ ಮಾರ್ಗದಲ್ಲಿ ಮೂರು ದಶಕಗಳ ಹಿಂದೆಯೇ 30 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಇದುವರೆಗೂ ಮೀಸಲು ಜಮೀನು ಬಳಕೆಯಾಗಿಲ್ಲ. ಅದರಲ್ಲಿ ದೊಡ್ಡದೊಡ್ಡ ಮುಳ್ಳಿನ ಪೋದೆಗಳು ಬೆಳೆದಿವೆ. ಈ ಮಧ್ಯೆ ಜಮೀನು ನೀಡಿದವರು ಹೆಚ್ಚುವರಿ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋಗಿದ್ದರು. ಐ–ತೀರ್ಪಿನ ಬಳಿಕ ಪರಿಹಾರ ವಿತರಣೆಯೂ ಮುಗಿದಿದೆ. ಪಹಣಿಗಳಲ್ಲಿ ಈಗಾಗಲೇ ಕೆಐಎಡಿಬಿ ಹೆಸರು ಸೇರ್ಪಡೆಯಾಗಿದೆ.

ADVERTISEMENT

ಮುಳ್ಳಿನ ಪೋದೆಗಳನ್ನು ಕತ್ತರಿಸಿ ಸರ್ವೇ ಮಾಡಿಸುವ ಜವಾಬ್ದಾರಿ ನಿಭಾಯಿಸಬೇಕಾದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಪ್ರಾದೇಶಿಕ ಕಚೇರಿಯ ಎಂಜಿನಿಯರುಗಳು ಇದುವರೆಗೂ ಸ್ಪಂದಿಸುತ್ತಿಲ್ಲ. ರಾಯಚೂರು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯು 2017 ರಿಂದಲೂ ಸಭೆಗಳನ್ನು ನಡೆಸಿ ಸೂಚನೆ ನೀಡುತ್ತಾ ಬರಲಾಗಿದೆ. ವಾಸ್ತವದಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಪಡಿಸುವ ಕೆಲಸ ಮಾತ್ರ ಆಗುತ್ತಿಲ್ಲ. ಉದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಯೋಜನೆ ಮಾಡಿಕೊಂಡವರಿಗೆ ಸೂಕ್ತ ಸ್ಥಳಾವಕಾಶವಿಲ್ಲದೆ ನಿರಾಸೆ ಅನುಭವಿಸುತ್ತಿದ್ದಾರೆ.

ದೇವದುರ್ಗಕ್ಕೆ ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಂದ ಉದ್ದಿಮೆಗಳು ಬರುವುದಕ್ಕೆ ಅವಕಾಶವಾಗುತ್ತಿಲ್ಲ. ಹೀಗಾಗಿ ಯುವಕರಿಗೆ ಉದ್ಯೋಗಾಕಾಶಗಳಿಲ್ಲ. ರಾಘವೇಂದ್ರ ಕುಷ್ಟಗಿ ಅವರ ನೇತೃತ್ವದಲ್ಲಿ ಜನಸಂಗ್ರಾಮ ಪರಿಷತ್‌ ನಡೆಸಿದ ಹೋರಾಟದಿಂದಾಗಿ ದೇವದುರ್ಗ ಕೈಗಾರಿಕಾ ವಲಯದ ಜಮೀನು ಉಳಿದಿದೆ. ಮೂಲ ಉದ್ದೇಶಕ್ಕೆ ಬಳಕೆಯಾಗದ ಭೂಮಿಯನ್ನು ಅತಿಕ್ರಮಿಸುವುದಕ್ಕೆ ರಾಜಕಾರಣಿಗಳು ಮತ್ತು ಭೂ ಪರಿಹಾರ ಪಡೆದುಕೊಂಡವರು ಕಾಯುತ್ತಲೇ ಇದ್ದಾರೆ. ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಜನಸಂಗ್ರಾಮ ಪರಿಷತ್‌ನಿಂದ ಜಿಲ್ಲಾಡಳಿತಕ್ಕೆ ನಿರಂತರ ಒತ್ತಾಯ ಮಾಡಲಾಗುತ್ತಿದೆ. ‘ಕೆಐಎಡಿಬಿ ಕೇಂದ್ರ ಕಚೇರಿಗೆ ಪತ್ರ ಬರೆಯಬೇಕು. ದೇವದುರ್ಗದಲ್ಲಿ ತುರ್ತಾಗಿ ಕೈಗಾರಿಕಾ ವಲಯದ ಅಭಿವೃದ್ಧಿಗಾಗಿ ಜಿಲ್ಲಾಡಳಿತವೇ ನೇರವಾಗಿ ಕ್ರಮವಹಿಸಬೇಕು‘ ಎನ್ನುವುದು ಹೋರಾಟಗಾರರ ಒತ್ತಾಯ.

ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್ ನಾಯಕ ಅವರು ಕಳೆದ ಜೂನ್‌ನಲ್ಲಿ ಏಕಗವಾಕ್ಷಿ ಸಮಿತಿ ಸಭೆ ನಡೆಸಿದ್ದಾರೆ. ದೇವದುರ್ಗದ ಕೈಗಾರಿಕಾ ವಲಯ ಮೀಸಲು ಜಾಗದಲ್ಲಿ ಗಿಡಗಂಟಿ ಸ್ವಚ್ಛ ಮಾಡದೆ, ನೀಲನಕ್ಷೆ ತಯಾರಿಸಿಲ್ಲ ಏಕೆ ಎಂದು ಕೆಐಎಡಿಬಿ ಎಇಇ‌ ಅವರನ್ನು ಪ್ರಶ್ನಿಸಿದ್ದಾರೆ. ‘ಈ ಹಿಂದೆ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ ನೀಡಿದ್ದ ಸೂಚನೆಗಳಂತೆ ಯಾವುದೇ ಕ್ರಮವಾಗದ ಬಗ್ಗೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮತ್ತು ಕೈಗಾರಿಕಾ ವಲಯದ ಹೆಚ್ಚುವರಿ ಕಾರ್ಯದರ್ಶಿಗೆ ಪತ್ರ ಬರೆಯಬೇಕು‘ ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.