ADVERTISEMENT

ಮೂರು ತಿಂಗಳಿಂದ ಸಮರ್ಪಕ ವೇತನವಿಲ್ಲ!

ಸಂಕಷ್ಟದಲ್ಲಿ ಕೆಕೆಆರ್‌ಟಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ

ನಾಗರಾಜ ಚಿನಗುಂಡಿ
Published 2 ಡಿಸೆಂಬರ್ 2021, 14:54 IST
Last Updated 2 ಡಿಸೆಂಬರ್ 2021, 14:54 IST
ಸಿಂಧನೂರು ಬಸ್‌ ಡಿಪೋ 
ಸಿಂಧನೂರು ಬಸ್‌ ಡಿಪೋ    

ರಾಯಚೂರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಮರ್ಪಕವಾಗಿ ವೇತನ ಜಮೆಯಾಗದೆ, ಸಂಕಷ್ಟ ಅನುಭವಿಸುತ್ತಿದ್ದಾರೆ.

ಸೆಪ್ಟೆಂಬರ್‌, ಅಕ್ಟೋಬರ್‌ ಹಾಗೂ ನವೆಂಬರ್‌ ಮೂರು ತಿಂಗಳಿಂದ ವೇತನ ನೀಡಿರಲಿಲ್ಲ. ಡಿಸೆಂಬರ್‌ 1ರಂದು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳುಗಳ ಅರ್ಧದಷ್ಟು ವೇತನ ಜಮೆ ಮಾಡಲಾಗಿದೆ. ವೇತನವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಸಿಬ್ಬಂದಿಯು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ವೇತನ ಆಧಾರವಾಗಿಟ್ಟುಕೊಂಡು ಸಾಲ ಪಡೆದವರು ಇನ್ನೂ ತೊಂದರೆಗೀಡಾಗಿದ್ದಾರೆ.

‘ಮಕ್ಕಳ ಶಾಲೆ, ಕಾಲೇಜಿಗೆ ಶುಲ್ಕ ತುಂಬುವುದಕ್ಕೆ, ಮನೆಯಲ್ಲಿ ನಡೆದ ಸಮಾರಂಭಕ್ಕಾಗಿ ಸಾಲ ಮಾಡಿದ್ದೇವೆ. ಪ್ರತಿ ತಿಂಗಳು ವೇತನದಲ್ಲಿ ಕಂತು ಕಡಿತವಾದರೆ ತೊಂದರೆ ಇರುವುದಿಲ್ಲ. ಈಗ ಕಂತುಗಳನ್ನು ತುಂಬದೆ ಇರುವುದರಿಂದ ಹೆಚ್ಚುವರಿ ಬಡ್ಡಿ ಕಟ್ಟಬೇಕು. ಕೈ ಸಾಲ ಪಡೆದುಕೊಂಡಿದ್ದಕ್ಕೆ ಅವಮಾನ ಅನುಭವಿಸುವ ಸ್ಥಿತಿ ಬಂದಿದೆ. ಉದ್ರಿ ಕಿರಾಣಿ ಸಂತೆ ಕೂಡಾ ಸಿಗುತ್ತಿಲ್ಲ. ಜೀವನ ಸಾಗಿಸುವುದು ದುಸ್ತರವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಸ್‌ ಚಾಲಕರೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ADVERTISEMENT

ಎನ್‌ಇಕೆಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಯುನಿಯನ್‌ ರಾಯಚೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ ಅವರು ಹೇಳುವ ಪ್ರಕಾರ, ‘ಸರ್ಕಾರದಿಂದ ಅನುದಾನ ಪಡೆದು ಸಾರಿಗೆ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ಡಿಸೆಂಬರ್‌ 15 ರೊಳಗಾಗಿ ಸರ್ಕಾರವು ಅನುದಾನ ಬಿಡುಗಡೆ ಮಾಡಲಿದೆ. ಮುಂಬರುವ ತಿಂಗಳುಗಳಲ್ಲಿ ಸಂಸ್ಥೆಯಿಂದಲೇ ವೇತನ ಜಮೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಡೀಸೆಲ್‌ ಹಾಗೂ ಬಸ್‌ ಬಿಡಿಭಾಗಗಳು ದುಬಾರಿ ಆಗಿದ್ದರಿಂದ ಸಾರಿಗೆ ಸಂಸ್ಥೆಗಳು ಸ್ವಲ್ಪ ನಷ್ಟ ಅನುಭವಿಸುತ್ತಿವೆ’ ಎಂದರು.

ಕೆಕೆಆರ್‌ಟಿಸಿ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವೆಂಕಟೇಶ ಅವರು ಪ್ರತಿಕ್ರಿಯೆ ನೀಡಿ, ‘ಕೋವಿಡ್‌ ಪೂರ್ವದಲ್ಲಿ ರಾಯಚೂರು ವಿಭಾಗದಲ್ಲಿ ಬಸ್‌ ಸಂಚಾರದಿಂದ ಪ್ರತಿದಿನ ₹60 ರಿಂದದ ₹65 ಲಕ್ಷ ಸಂಗ್ರಹ ಆಗುತ್ತಿತ್ತು. ಸದ್ಯ ₹45 ರಿಂದ ₹50 ಲಕ್ಷದವರೆಗೂ ಸಂಗ್ರಹ ಆಗುತ್ತಿದೆ. ವಿದ್ಯಾರ್ಥಿಗಳ ಓಡಾಟ ಸಹಜ ಸ್ಥಿತಿಗೆ ಬಂದಿದೆ. ಆದರೆ ಸಾರ್ವಜನಿಕರು ಪ್ರಯಾಣಿಸುವುದು ಇನ್ನೂ ಸಹಜ ಸ್ಥಿತಿಗೆ ಬರಬೇಕಿದೆ. ಆದರೂ ಸಂಸ್ಥೆಗೆ ನೀಡಿರುವ ಆದಾಯ ಗುರಿ ತಲುಪುವ ವಿಶ್ವಾಸವಿದೆ. ಬಸ್‌ಗಳು ಎಲ್ಲ ಮಾರ್ಗಗಳಲ್ಲಿ ಎಂದಿನಂತೆಯೇ ಸಂಚರಿಸುತ್ತಿವೆ. ಮಾರ್ಗಗಳ ಸಂಖ್ಯೆ ಕಡಿಮೆ ಮಾಡಿಲ್ಲ’ ಎಂದು ಹೇಳಿದರು.

ವೇತನವು ಸಮರ್ಪಕವಾಗಿ ಜಮೆ ಆಗದೆ ಇರುವುದರಿಂದ ಬಸ್‌ ಚಾಲಕರು ಮತ್ತು ನಿರ್ವಾಹಕರು ತಮ್ಮ ಕುಟುಂಬ ನಿರ್ವಹಣೆ ಮಾಡಲು ಕಷ್ಟ ಅನುಭವಿಸುತ್ತಿದ್ದಾರೆ. ಮನೆ ಬಾಡಿಗೆ ಕಟ್ಟುವುದಕ್ಕೆ ಸಾಧ್ಯವಾಗದೆ, ಕುಟುಂಬಗಳನ್ನು ಅನಿವಾರ್ಯವಾಗಿ ಕೆಲವರು ಗ್ರಾಮಗಳಿಗೆ ಸ್ಥಳಾಂತರ ಮಾಡಿದ್ದಾರೆ. ಮುಂದಿನ 15 ದಿನಗಳಲ್ಲಿಯಾದರೂ ಬಾಕಿ ವೇತನ ಬಿಡುಗಡೆಯಾದರೆ ಸಾಕು, ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.