ADVERTISEMENT

ರಾಯಚೂರು | ಕೃಷ್ಣಾನದಿ ನಡುಗಡ್ಡೆಯ ಜನರಲ್ಲಿ ಮತ್ತೆ ಆತಂಕ

ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 11 ಜುಲೈ 2020, 19:30 IST
Last Updated 11 ಜುಲೈ 2020, 19:30 IST
ಕೃಷ್ಣಾ ಪ್ರವಾಹದಿಂದ ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಸೇತುವೆ 2019ರ ಆಗಸ್ಟ್‌ನಲ್ಲಿ ಮುಳುಗಡೆಯಾದ ಪರಿಣಾಮ ನಡುಗಡ್ಡೆಯಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ಸ್ಥಳೀಯರು ಸುರಕ್ಷಿತವಾಗಿ ದಾಟಿಸುತ್ತಿರುವುದು (ಸಂಗ್ರಹ ಚಿತ್ರ)
ಕೃಷ್ಣಾ ಪ್ರವಾಹದಿಂದ ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಸೇತುವೆ 2019ರ ಆಗಸ್ಟ್‌ನಲ್ಲಿ ಮುಳುಗಡೆಯಾದ ಪರಿಣಾಮ ನಡುಗಡ್ಡೆಯಲ್ಲಿ ಸಿಲುಕಿದ್ದ ಅಧಿಕಾರಿಗಳನ್ನು ಸ್ಥಳೀಯರು ಸುರಕ್ಷಿತವಾಗಿ ದಾಟಿಸುತ್ತಿರುವುದು (ಸಂಗ್ರಹ ಚಿತ್ರ)   

ಲಿಂಗಸುಗೂರು:ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶದ ಸಂತ್ರಸ್ತ ಕುಟುಂಬಸ್ಥರಿಗೆ ಎರಡು ದಶಕಗಳ ಅವಧಿಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ಕೊಡುತ್ತ ಬಂದಿರುವ ಆಡಳಿತ ಇಂದಿಗೂ ಏನೊಂದು ವ್ಯವಸ್ಥೆ ಕಲ್ಪಿಸಿಲ್ಲ. ಸಂರಕ್ಷಣೆ ಭರವಸೆಗಳು ಹುಸಿಯಾಗಿರುವುದು ನಡುಗಡ್ಡೆ ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ನಾರಾಯಣಪುರ ಕೆಳಭಾಗ ಕೃಷ್ಣಾನದಿಗೆ ಜುಲೈ 12 ರ ನಂತರ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆ ಇದೆ. ನದಿಪಾತ್ರದಲ್ಲಿ ಜನರು ಜಾಗೃತಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಈಗಾಗಲೇ ಸೂಚನೆ ನೀಡಿದ್ದಾರೆ.

ಇದೀಗ ನಡುಗಡ್ಡೆ ಪ್ರದೇಶದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ADVERTISEMENT

ಕೃಷ್ಣಾ ಪ್ರವಾಹದಿಂದ ಕರಕಲಗಡ್ಡಿ (4), ಅರಲಗಡ್ಡಿ(11), ವಂಕಂನಗಡ್ಡಿಯಲ್ಲಿ (1) ಕುಟುಂಬ ಸೇರಿ ಒಟ್ಟು 16 ಕುಟುಂಬದ 60ಕ್ಕೂ ಹೆಚ್ಚು ಜನರು ಪ್ರತಿ ವರ್ಷ ಸಂಕಷ್ಟ ಎದುರಿಸುತ್ತ ಬಂದಿದ್ದಾರೆ. 4 ವರ್ಷಗಳಿಂದ ಮನೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿದ್ದು ಬಿಟ್ಟರೆ ಏನೊಂದು ಪ್ರಗತಿ ಕಾಣದೆ ಹೋಗಿರುವುದು ಸಂತ್ರಸ್ತ ಕುಟುಂಬಸ್ಥರಲ್ಲಿ ನಿರಾಶೆ ಭಾವನೆ ಮೂಡಿದೆ.

ದಶಕದ ಹಿಂದೆ ಕೃಷ್ಣಾ ಪ್ರವಾಹ ದಾಟಲು ಯತ್ನಿಸಿದ್ದ ಯರಗೋಡಿ ಇಬ್ಬರು ತೆಪ್ಪ (ಹರಗೋಲು) ಮುಳುಗಿ ಮೃತಪಟ್ಟಿದ್ದಾರೆ. ಏಳು ವರ್ಷಗಳ ನಂತರ ಪರಿಹಾರ ನೀಡುವ ಭರವಸೆ ನೀಡಿದ್ದ ತಾಲ್ಲೂಕು ಮತ್ತು ಜಿಲ್ಲಾ ಆಡಳಿತ ಇಂದಿಗೂ ಬಿಡಿಕಾಸು ಪರಿಹಾರ ನೀಡಿಲ್ಲ. ಆರು ವರ್ಷಗಳಿಂದ ಕಚೇರಿಗೆ ಅಲೆದು ಸುಸ್ತಾದ ಕುಟುಂಬಕ್ಕೆ ನ್ಯಾಯ ಒದಗಿಸಲು ಯಾವೊಬ್ಬ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬುದು ಕುಟುಂಬಸ್ಥರ ಆರೋಪ.

ಜಲದುರ್ಗ, ಶೀಲಹಳ್ಳಿ, ಯರಗೋಡಿ ಸೇತುವೆಗಳು ಮುಳುಗಿ ಭಾಗಶಃ ಕೊಚ್ಚಿ ಹೋಗಿದ್ದವು. ಅವುಗಳ ಶಾಶ್ವತ ದುರಸ್ತಿಯು ಆಗುತ್ತಿಲ್ಲ. ಈ ಸಂದರ್ಭದಲ್ಲಿ ನದಿ ಪಾತ್ರದ ಜಮೀನುಗಳು ಕೊಚ್ಚಿ ಕೋಟ್ಯಂತರ ಮೌಲ್ಯದ ಫಸಲು ಕೃಷ್ಣೆಯ ಪಾಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಹುತೇಕರಿಗೆ ಪರಿಹಾರ ಕೂಡ ಜಮೆ ಆಗಿಲ್ಲ.

ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ನಾರಾಯಣಪುರ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗುವ ಸಾಧ್ಯತೆಗಳಿವೆ. ಈಗಾಗಲೇ ರಾಯಚೂರು ಮತ್ತು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅಣೆಕಟ್ಟೆ ವಿಭಾಗ ಕಾರ್ಯನಿರ್ವಾಹಕ ಎಂಜಿನಿಯರ್‌, ಕೃಷ್ಣಾ ನದಿ ಪಾತ್ರದ ಜನತೆ ಜಾನುವಾರುಗಳನ್ನು ಎತ್ತರ ಪ್ರದೇಶಕ್ಕೆ ಸ್ಥಳಾಂತರ ಹಾಗೂ ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

ಉಪ ವಿಭಾಗಾಧಿಕಾರಿ ರಾಜಶೇಖರ ಡಂಬಳ ಮಾತನಾಡಿ, ‘ಕೃಷ್ಣಾ ನದಿಗೆ ನೀರು ಬಿಡುವ ಸಾಧ್ಯತೆಗಳ ಕುರಿತು ಈಗಾಗಲೆ ನಡುಗಡ್ಡೆ ಜನರಿಗೆ ಮಾಹಿತಿ ನೀಡಲಾಗಿದೆ. 13ವರ್ಷಗಳ ಹಿಂದೆ ಮೃತಪಟ್ಟವರ ಹಾಗೂ ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ತಾಂತ್ರಿಕ ತೊಂದರೆಗಳಿದ್ದು ಪರಿಶೀಲಿಸಲಾಗುವುದು. ಕಳೆದ ವರ್ಷದ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಗೊಂದಲ ಇದ್ದು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.