ADVERTISEMENT

ಲಿಂಗಸುಗೂರು: ಕುಪ್ಪಿಭೀಮ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 13:12 IST
Last Updated 19 ಡಿಸೆಂಬರ್ 2021, 13:12 IST
ಲಿಂಗಸುಗೂರು ತಾಲ್ಲೂಕು ಕಸಬಾ ಲಿಂಗಸುಗೂರಲ್ಲಿ ಶನಿವಾರ ಸಂಜೆ ಕುಪ್ಪಿಭೀಮ ಜಾತ್ರೆ ನಿಮಿತ್ತ ಮಹಾರಥೋತ್ಸವ ಜರುಗಿತು
ಲಿಂಗಸುಗೂರು ತಾಲ್ಲೂಕು ಕಸಬಾ ಲಿಂಗಸುಗೂರಲ್ಲಿ ಶನಿವಾರ ಸಂಜೆ ಕುಪ್ಪಿಭೀಮ ಜಾತ್ರೆ ನಿಮಿತ್ತ ಮಹಾರಥೋತ್ಸವ ಜರುಗಿತು   

ಲಿಂಗಸುಗೂರು: ತಾಲ್ಲೂಕಿನ ಕಸಬಾಲಿಂಗಸುಗೂರು ಗ್ರಾಮದ ಆರಾಧ್ಯ ದೈವ ಕುಪ್ಪೆಭೀಮ (ಆಂಜನೇಯ) ದೇವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ಸಂಭ್ರಮದಿಂದ ರಥೋತ್ಸವ ಜರುಗಿತು.

ವಾರದಿಂದ ದೇವಸ್ಥಾನ ಸಮಿತಿ ಸದಸ್ಯರು, ಅರ್ಚಕರ ಸಹಯೋಗದಲ್ಲಿ ಪೂಜಾ ಕೈಂಕರ್ಯಗಳು ನಡೆಸಿಕೊಂಡು ಬರಲಾಯಿತು. ಹುಣ್ಣಿಮೆ ದಿನವಾದ ಶನಿವಾರ ಬೆಳಗಿನ ಜಾವ ಕುಪ್ಪಿಭೀಮ ದೇವರಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವೈವಿಧ್ಯಮಯ ಹೂಗಳು, ರಜತ ಕವಚಗಳಿಂದ ಅಲಂಕಾರ ಮಾಡಿ ಮಹಾಮಂಗಳಾರತಿ ಸಲ್ಲಿಸಲಾಯಿತು.

ಗಂಗಾಸ್ಥಳದಿಂದ ಕಳಸದ ಆಗಮನ ಆಗುತ್ತಿದ್ದಂತೆ ವಿಪ್ರ ಸಮಾಜದ ಬಂಧುಗಳು ರಥಕ್ಕೆ ಕಳಸಾರೋಹಣ ನೆರವೇರಿಸಿದರು. ರಥಕ್ಕೆ ತಳಿರುತೋರಣ, ಹಣ್ಣು ಕಟ್ಟಿ ಅಲಂಕಾರ ಮಾಡಿ, ರಥ ಬೀದಿಯಲ್ಲಿ ರಥಾಂಗಹೋಮ ನಡೆಸಿದರು. ಸಾಂಪ್ರದಾಯದಂತೆ ಬ್ರಾಹ್ಮಣ ಸಮಾಜದವರೆ ರಥವನ್ನು ಎಳೆದು ರಥೋತ್ಸವಕ್ಕೆ ಹಸಿರು ನಿಶಾನೆ ತೋರಿದರು.

ADVERTISEMENT

ಗ್ರಾಮಸ್ಥರು ರಥಕ್ಕೆ ವೈವಿಧ್ಯಮಯ ಬೃಹದಾಕಾರದ ಹೂವಿನ ಹಾರಗಳು, ತೊಟ್ಟಿಲುಗಳಿಂದ ಅಲಂಕಾರ ಮಾಡಿದರು. ರಥಕ್ಕೆ ವಿದ್ಯುತ್‍ ದೀಪಗಳ ಅಲಂಕಾರ ನೆರವೇರಿಸುತ್ತಿದ್ದಂತೆ ಪ್ರತಿನಿಧಿಗಳು, ಅರ್ಚಕರು, ಸದಸ್ಯರು ರಥಕ್ಕೆ ಕಾಯಿ, ಕರ್ಪೂರ ಅರ್ಪಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಜಯಘೋಷ ಹಾಕುತ್ತ ರಥ ಎಳೆದು ಭಕ್ತಿ ಭಾವ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.