ADVERTISEMENT

ಲಿಂಗಸುಗೂರು | ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ 27ರಿಂದ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:18 IST
Last Updated 16 ನವೆಂಬರ್ 2025, 5:18 IST
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಕುಪ್ಪಿಭೀಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.
ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಕುಪ್ಪಿಭೀಮದೇವರ ಜಾತ್ರಾಮಹೋತ್ಸವ ಪ್ರಯುಕ್ತ ಪೂರ್ವಭಾವಿ ಸಭೆ ನಡೆಯಿತು.   

ಲಿಂಗಸುಗೂರು: ನ. 27ರಿಂದ ಡಿ. 7ರವರೆಗೆ ನಡೆಯುವ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದ ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ ಸಮಾರಂಭ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು’ ಎಂದು ತಹಶೀಲ್ದಾರ್‌ ಸತ್ಯಮ್ಮ ಹೇಳಿದರು.

ಕಸಬಾಲಿಂಗಸುಗೂರು ಗ್ರಾಮದ ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ ಪ್ರಯುಕ್ತ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕುಪ್ಪಿಭೀಮ ದೇವರ ಜಾತ್ರಾ ಮಹೋತ್ಸವದಂದು ಎಳೆಯುವ ರಥವನ್ನು ಗ್ರಾಮದ ರಥಶಿಲ್ಪಿ ದಿ. ಈರಪ್ಪ ಬಡಿಗೇರ ನಿರ್ಮಿಸಿ 100 ವರ್ಷ ತುಂಬಿದ ನಿಮಿತ್ತ ರಥಶತಮಾನೋತ್ಸವಕ್ಕಾಗಿ ಗ್ರಾಮಸ್ಥರ ಸಹಕಾರದೊಂದಿಗೆ ವಿಶೇಷ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ನಿರ್ವಹಣೆಗಾಗಿ ಗ್ರಾಮಸ್ಥರು ಉಪಸಮಿತಿ ರಚಿಸಿದ್ದಾರೆ. ಸಮಿತಿಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಾರಂಭವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ರಥೋತ್ಸವಕ್ಕೆ ಹೆಲಿಕ್ಯಾಪ್ಟರ್ ನಿಂದ ಪುಷ್ಟವೃಷ್ಟಿ ಮಾಡಲಾಗುತ್ತಿದ್ದರಿಂದ, ಅದಕ್ಕೆ ಸುರಕ್ಷತೆ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಪಿಡಬ್ಲೂಡಿ ಅಧಿಕಾರಿಗೆ ಸೂಚಿಸಿದರು. ಜಾತ್ರಾ ಮಹೋತ್ಸವ ಯಶಸ್ಸಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿ, ಕಾರ್ಯನಿರ್ವಹಿಸಬೇಕು’ ಎಂದರು.

ADVERTISEMENT

ಪಿಐ ಪುಂಡಲಿಕ ಪಟತಾರ ಮಾತನಾಡಿ, ‘ರಥೋತ್ಸವದಂದು ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ವಾಹನ, ಬೈಕ್‌ಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಕ್ಕೆ ವ್ಯವಸ್ಥೆ ಮಾಡಿಕೊಡಿಬೇಕು. ಸೂಕ್ತ ಭದ್ರತೆಗೆ ಮೂರು ದಿನಗಳವರೆಗೆ ದೇವಸ್ಥಾನ ಸಮಿತಿಯಿಂದ 50 ಗೃಹ ರಕ್ಷಕ ದಳ ಸಿಬ್ಬಂದಿ ನಿಯೋಜಿಸಬೇಕು. ರಥ ಎಳೆಯುವ ಮಾರ್ಗದಲ್ಲಿ ಬ್ಯಾರಿಕೇಡ್ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲು ಸಮಿತಿ ಸಹಕಾರ ನೀಡಬೇಕು. ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತ ಹಾಗೂ ಸಂಭ್ರಮದಿಂದ ಜಾತ್ರಾಮಹೋತ್ಸವ ನಡೆಯಲು ಸಹಕಾರ ನೀಡಬೇಕು ಎಂದು ಹೇಳಿದರು.

ಗ್ರಾಮದ ಮುಖಂಡ ರಮೇಶ ತಲೆವಡಕರ ಮಾತನಾಡಿ, ‘ನ. 27ರಂದು ಸಂಜೆ 6.30ರಿಂದ ಸುಂದರಕಾಂಡ ಆಂಜನೇಯ ದಿವ್ಯ ಚರಿತ್ರೆ ಕಾರ್ಯಕ್ರಮದಲ್ಲಿ ಕಜ್ಜಿಡೋಣಿ ಶಂಕರಚಾರ್ಯ ಅವಧೂತ ಆಶ್ರಮದ ಕೃಷ್ಣಾನಂದ ಶರಣರು, ಬೆಂಗಳೂರಿನ ಜಗದೀಶ ಶರ್ಮಾ ಸಂಪ ಪ್ರವಚನ ನೀಡಲಿದ್ದಾರೆ. ಡಿ. 2ರಂದು ಬೆಳಿಗ್ಗೆ 10ಕ್ಕೆ 25 ಜೋಡಿ ಸಾಮೂಹಿಕ ವಿವಾಹ ಹಾಗೂ ಆದಿದೈವ ಕುಪ್ಪಿಭೀಮ ಕೃತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಿ. 3ರಂದು ಬೆಳಿಗ್ಗೆ 10 ಗಂಟೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅಂದು ರಾತ್ರಿ 8 ಗಂಟೆಗೆ ಅಖಂಡ ಭಜನೆ ನಡೆಯಲಿದೆ. ಡಿ. 4ರಂದು ಸಂಜೆ 5 ಗಂಟೆಗೆ ಶತಮಾನ ರಥೋತ್ಸವಕ್ಕೆ ಹೆಲಿಕ್ಯಾಪ್ಟರ್‌ನಿಂದ ಪುಷ್ಟವೃಷ್ಟಿ ನಡೆಯಲಿದೆ. ಮಂತ್ರಾಲಯದ ಸುಬುದೇಂದ್ರತೀರ್ಥರು ಸಾನ್ನಿಧ್ಯ ವಹಿಸಲಿದ್ದಾರೆ. ಡಿ. 5ರಂದು ಸಂಜೆ 6ರಂದು ಸಮಾರೋಪದಲ್ಲಿ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಿ. 6ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ಉಚ್ಚಾಯ ಉತ್ಸವ ಹಾಗೂ ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಡಿ. 7ರಂದು ಗದಗ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯ ಅಜ್ಜನವರಿಗೆ ಭಕ್ತರಿಂದ ತುಲಾಭಾರ ಹಾಗೂ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರಿ ಗವಾಯಿ ನಾಟ್ಯಸಂಘದಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ಸಂತೆಕೆಲ್ಲೂರಿನ ಗುರುಬಸವ ಸ್ವಾಮೀಜಿ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.