
ರಾಯಚೂರು: ವಿಬಿ ಜಿರಾಮ್ ಜಿ-ವಿಮಾ ತಿದ್ದುಪಡಿ ಕಾಯ್ದೆ ರದ್ದುಗೊಳಿಸಿ, ಮನರೇಗಾ ಕಾಯ್ದೆ ಪುನರ್ ಸ್ಥಾಪಿಸಿ ಬಲಪಡಿಸಬೇಕು. ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಹಿಂಪಡೆಯಬೇಕು. ಬೀಜ ಮಸೂದೆ ವಿರೋಧಿಸಿ ಫೆಬ್ರವರಿ 12 ರಂದು ನಡೆಯುವ ಸಾರ್ವತ್ರಿಕ ಮುಷ್ಕರದಲ್ಲಿ ದುಡಿಯುವ ವರ್ಗಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಐಸಿಸಿಟಿಯು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಅಜೀಜ್ ಜಾಗೀರ್ದಾರ್ ಮನವಿ ಮಾಡಿದರು.
ರಾಯಚೂರು ತಾಲ್ಲೂಕಿನ ಅರಳಿಬೆಂಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಎಐಸಿಸಿಟಿಯು ಸಂಘಟನೆ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರಪತ್ರ ಹಂಚಿ ಪ್ರಚಾರಾಂದೋಲನ ನಡೆಸಿ ಅವರು ಮಾತನಾಡಿದರು
ದುಡಿಯುವ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನುಗಳನ್ನು ಜಾರಿ ಮಾಡದೆ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ಕಾನೂನು ಜಾರಿ ಮಾಡಿ ದುಡಿಯುವ ವರ್ಗಗಳ ಜನರನ್ನು ಸಂಕಷ್ಟಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿದರು.
ನೂತನ ಶಿಕ್ಷಣ ನೀತಿ, ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಮರುಸ್ಥಾಪನೆ, ಕೆಲಸದ ಅವಧಿ 12ಗಂಟೆಗೆ ವಿಸ್ತರಣೆ ಸೇರಿ ವಿವಿಧ ಆದೇಶಗಳನ್ನು ಧಿಕ್ಕರಿಸಿ ದೇಶದ ಎಲ್ಲ ಭಾಗಗಳಲ್ಲಿ ಮುಷ್ಕರ ನಡೆಸಲಾಗುತ್ತಿದೆ. ಕಾರ್ಮಿಕರು, ದುಡಿಯುವ ವರ್ಗದವರು ಭಾಗವಹಿಸುವ ಮೂಲಕ ಮುಷ್ಕರ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಾಗೇಂದ್ರ, ನರಸಪ್ಪ, ಈರಣ್ಣ, ಸಣ್ಣ ತಾಯಪ್ಪ, ಯಲ್ಲಪ್ಪ, ದೇವರಾಜ, ನರಸಿಹಲು, ಆಂಜನೇಯ, ವೆಂಕಟೇಶ, ತಿಪ್ಪಣ್ಣ ಉಪಸ್ಥಿತರಿದ್ದರು.