
ಕವಿತಾಳ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮೀಪದ ವಟಗಲ್ ಗ್ರಾಮ ಪಂಚಾಯಿತಿ ಎದುರು ವಿಬಿ ಜಿ ರಾಮ್ ಜಿ ಕೂಲಿಕಾರರು ಗುರುವಾರ ಪ್ರತಿಭಟನೆ ನಡೆಸಿದರು.
‘ಸ.ನಂ 170ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು 14 ದಿನ ನಿರ್ವಹಿಸಿದ ಕೂಲಿಕಾರರಿಗೆ ನಿತ್ಯ ಕೇವಲ ₹60ರಂತೆ ಕೂಲಿ ಪಾವತಿ ಮಾಡಲಾಗಿದೆ. ಅಧಿಕಾರಿಗಳು ಯಂತ್ರ ಬಳಸಿ ಅಧಿಕ ಕಾಮಗಾರಿ ನಿರ್ವಹಿಸಿ ವಂಚಿಸುತ್ತಿದ್ದಾರೆ. ಕೂಲಿ ಪಾವತಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಕೂಲಿಕಾರರು ಆರೋಪಿಸಿದರು.
‘ನಿತ್ಯ ₹370 ಕೂಲಿ ಪಾವತಿಸಬೇಕು, ಕಾಮಗಾರಿ ಸ್ಥಳದಲ್ಲಿ ಶಾಮಿಯಾನ ಹಾಕಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಕಾಮಗಾರಿ ಸ್ಥಳಕ್ಕೆ ಹೋಗಿ ಬರಲು ಆಟೊ ಒದಗಿಸಬೇಕು’ ಎಂದು ಕಾರ್ಮಿಕ ಸುಭಾಶ್ಚಂದ್ರ ಕಡಬೂರು ಆಗ್ರಹಿಸಿದರು.
‘ಬೇಸಿಗೆ ಆರಂಭವಾಗುತ್ತಿದ್ದು ನೆರಳು ಮತ್ತು ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆಯಾಗುತ್ತಿದೆ, ಒಂದು ತಿಂಗಳಿಂದ ಕುಡಿಯುವ ನೀರು ಒದಗಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಲಕ್ಷ್ಮೀ ದೂರಿದರು.
ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಶಿವಾನಂದರೆಡ್ಡಿ ಅವರು ಲಿಖಿತ ಭರವಸೆ ನೀಡದ ಕಾರಣ ಪ್ರತಿಭಟನೆ ಮುಂದುರೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.
ಅಮರೇಶ ಸಾನಬಾಳ, ಬಸವರಾಜ, ಮೌನೇಶ ಹುಲ್ಲೂರು, ಮಲ್ಲಯ್ಯ, ಶರಣಬಸಪ್ಪ, ಬಸವರಾಜ, ಮಹಾಂತಪ್ಪ, ಮರಿದೇವಪ್ಪ, ಯಲ್ಲಪ್ಪ, ಕನಕಪ್ಪ ನಾಯಕ, ಯಲ್ಲಮ್ಮ, ಶಂಕ್ರಮ್ಮ, ನೀಲಮ್ಮ, ಗಂಗಮ್ಮ, ಚನ್ನಮ್ಮ ಮತ್ತು ಶಾಂತಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.