ADVERTISEMENT

ಲಿಂಗಸುಗೂರು | ರಾಂಪೂರ ಏತ ನೀರಾವರಿ ಯೋಜನೆ: ಅನುದಾನ ಕೊರತೆ, ನಿರ್ವಹಣೆಗೆ ಪರದಾಟ

ಜಾಕ್‌ವೆಲ್‍ ಅವ್ಯವಸ್ಥೆ ಕೇಳುವವರಿಲ್ಲ

ಪ್ರಜಾವಾಣಿ ವಿಶೇಷ
Published 3 ಜನವರಿ 2024, 6:25 IST
Last Updated 3 ಜನವರಿ 2024, 6:25 IST
ಲಿಂಗಸುಗೂರು ತಾಲ್ಲೂಕಿನ ರಾಂಪೂರ-ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆಯ ಆನೆಹೊಸೂರು ಜಾಕವೆಲ್ ಬಳಿಯ ರೇಸಿಂಗ್ ಮೇನ್ ಪೈಪ್‌ನಲ್ಲಿ ಕೆಲ ತಿಂಗಳಿಂದ ಭಾರಿ ಪ್ರಮಾಣದ ನೀರು ಸೋರಿಕೆ ಆಗುತ್ತಿರುವುದು
ಲಿಂಗಸುಗೂರು ತಾಲ್ಲೂಕಿನ ರಾಂಪೂರ-ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆಯ ಆನೆಹೊಸೂರು ಜಾಕವೆಲ್ ಬಳಿಯ ರೇಸಿಂಗ್ ಮೇನ್ ಪೈಪ್‌ನಲ್ಲಿ ಕೆಲ ತಿಂಗಳಿಂದ ಭಾರಿ ಪ್ರಮಾಣದ ನೀರು ಸೋರಿಕೆ ಆಗುತ್ತಿರುವುದು   

ಲಿಂಗಸುಗೂರು: ರಾಂಪೂರ-ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಾಗಿನಿಂದ ಒಂದಿಲ್ಲೊಂದು ತಾಂತ್ರಿಕ, ಮುಖ್ಯ ಮತ್ತು ವಿತರಣಾ ನಾಲೆಗಳ ಕುಸಿತ, ಜಾಕ್‌ವೆಲ್‍ ಸಮಸ್ಯೆಗೆ ಕೆಲ ವರ್ಷಗಳಿಂದ ನಿರೀಕ್ಷಿತ ಅನುದಾನ ಬಿಡುಗಡೆ ಆಗದ ಕಾರಣ ನಿರ್ವಹಣೆಗೆ ಪರದಾಡುವಂತಾಗಿದೆ ಎಂಬುದು ಸಿಬ್ಬಂದಿ ಆರೋಪ.

ಆನೆಹೊಸೂರು ಜಾಕ್‌ವೆಲ್‌ದಿಂದ ಡೆಲೆವರಿ ಚೇಂಬರ್‌ಗೆ ನೀರು ಪೂರೈಸುವ ರೇಸಿಂಗ್‍ ಮೇನ್‍ ಪೈಪ್‍ಲೈನ್‍ದ ಪೈಪ್‍ಗಳ ಜೋಡಣೆ ಸ್ಥಳದಲ್ಲಿ ಸ್ಟೀಲ್‍ ಸ್ಪ್ರಿಂಗ್‍ ಭಾಗದಲ್ಲಿ ಭಾರಿ ಪ್ರಮಾಣದ ನೀರು ಸೋರಿಕೆ ಆಗುತ್ತಿದೆ. ರೈತರ ಜಮೀನಿಗೆ ಹರಿಯುವ ನೀರು ಪೈಪ್‍ಲೈನ್‍ ಮೂಲಕ ಪೋಲಾಗುತ್ತಿದ್ದರೂ ಅಧಿಕಾರಿಗಳು ಕಂಡುಕಾಣದಂತೆ ಇದ್ದಾರೆ.

ನವಲಿ ಮತ್ತು ಆನೆಹೊಸೂರು ಬಳಿ ನಿರ್ಮಿಸಿದ ಜಾಕ್‌ವೆಲ್‍ಗಳಲ್ಲಿ ರೈತರ ಜಮೀನಿಗೆ ಸಮರ್ಪಕ ನೀರೆತ್ತುವ ಪಂಪ್‍ಗಳ ಕೊರತೆ ಹಾಗೂ ದುರಸ್ತಿಗೆ ಬಂದಿರುವ ಪಂಪ್‍ ದುರಸ್ತಿ ಮಾಡಿಸಲಾಗುತ್ತಿಲ್ಲ. ಜಾಕ್‌ವೆಲ್‍ ಒಳಗಡೆ ಹೋದರೆ ನಿಲ್ಲದಾಗದಷ್ಟು ದುರ್ವಾಸನೆ, ಶುಚಿತ್ವಕ್ಕೆ ಮಾನ್ಯತೆ ನೀಡದಿರುವುದು ನೋವಿನ ಸಂಗತಿ. ಇರುವ ಪಂಪ್‍ಗಳ ಮೇಲೆಯೆ ನೀರು ಹರಿಸುವ ಹರಸಾಹಸ ನಡೆದಿದೆ.

ADVERTISEMENT

2006ರಲ್ಲಿ ಅನುಷ್ಠಾನಗೊಂಡ ಯೋಜನೆಗೆ 2013-14ರಲ್ಲಿ ಮಾತ್ರ ಎರಡು ಜಾಕ್‌ವೆಲ್‍ಗಳಿಗೆ ಒಂದರಂತೆ ಪಂಪ್‍ ಖರೀದಿಸಲಾಗಿದೆ. ಜಾಕ್‌ವೆಲ್‍ ನಿರ್ವಹಣಾ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಸಿಬ್ಬಂದಿಯನ್ನು ಪ್ರತ್ಯೇಕ ಟೆಂಡರ್ ಮೂಲಕ ತೆಗೆದುಕೊಂಡು ಕೆಲಸ ಮಾಡಿಸಲಾಗುತ್ತಿದೆ. ಈ ಟೆಂಡರ್ ನೀಡುವಲ್ಲಿ ಕೂಡ ಅಧಿಕಾರಿಗಳೇ ಮೇಲುಗೈ ಸಾಧಿಸುತ್ತಿದ್ದು ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಟ್ಟಂತಾಗಿದೆ.

ಒಂದೂವರೆ ದಶಕದ ಅವಧಿಯಲ್ಲಿ ಜಾಕ್‌ವೆಲ್‍ಗಳಿಂದ ಡೆಲೆವರಿ ಚೇಂಬರ್ ವರೆಗೆ ಹಾಕಿರುವ ರೇಸಿಂಗ್‍ ಮೇನ್‍ ಪೈಪ್‍ಲೈನ್‍ ನಿರೀಕ್ಷಿತ ನಿರ್ವಹಣೆ ಕಂಡಿಲ್ಲ. ಬಹುತೇಕ ಕಡೆಗಳಲ್ಲಿ ರೇಸಿಂಗ್‍ ಮೇನ್‍ ಪೈಪ್‍ಲೈನ್‍ದಲ್ಲಿ ಸೋರಿಕೆ ಕಾಣಿಸಿಕೊಂಡಿದ್ದು, ಕಾಲುವೆ ದುಸ್ಥಿತಿ ಹೇಳತೀರದು. ಕೊನೆ ಭಾಗದ ರೈತರು ಇಂದಿಗೂ ನೀರು ಪಡೆಯದಿರುವುದು ನಿರ್ವಹಣೆ ನಿರ್ಲಕ್ಷ್ಯಕ್ಕೆ ನಿದರ್ಶನ.

ಜಾಕ್‌ವೆಲ್‍ಗಳಲ್ಲಿ ದುರಸ್ತಿಗೆ ಬಂದಿರುವ ವಿದ್ಯುತ್‍ ಪರಿವರ್ತಕ ದುರಸ್ತಿ ಕಂಡಿಲ್ಲ. ಪಂಪ್‍ಗಳ ದುರಸ್ತಿ, ಸರ್ವೀಸ್‍ ಮಾಡಿಸಲಾಗದೆ ಇದ್ದ ಸ್ಥಿತಿಯಲ್ಲಿಯೇ ಓಡಿಸಲಾಗುತ್ತಿದೆ. ಸ್ಟಾಪ್‍ಲಾಗ್‍ ಗೇಟ್‍ಗಳು ಗಾಳಿ, ಮಳೆ, ಬಿಸಿಲಿಗೆ ಹಾಳಾಗಿ ಹೋಗಿವೆ.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಸ್ಥಳೀಯ ತಾಂತ್ರಿಕ ವಿದ್ಯಾಭ್ಯಾಸ ಮಾಡಿರುವ ಯುವಕರನ್ನು ಬಳಸಿಕೊಂಡು ನಿಗದಿತ ವೇತನ ನೀಡದೆ ನಿರ್ವಹಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವಾಸಿಸಲು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂಬುದು ಹೆಸರು ಹೇಳಲಿಚ್ಛಿಸದ ನೌಕರರ ಆರೋಪ.

ಏತ ನೀರಾವರಿ ಯೋಜನೆ ಜಾಕ್‌ವೆಲ್‍ ಮತ್ತು ಪೈಪ್‍ಲೈನ್‍ ಸೇರಿದಂತೆ ನಿರ್ವಹಣೆಗಾಗಿ ಆನೆಹೊಸೂರು ಮತ್ತು ನವಲಿ ಜಾಕ್‌ವೆಲ್‍ ಸೇರಿ ಒಟ್ಟು ₹5 ಕೋಟಿ ಕ್ರಿಯಾಯೋಜನೆ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಸಲ್ಲಿಸಿದೆ. ಹಣಕಾಸಿನ ಕೊರತೆ ಮುಂದಿಟ್ಟು ಒಪ್ಪಿಗೆ ಸೂಚಿಸದಿರುವುದು ನಿರ್ವಹಣೆಗೆ ಸವಾಲಾಗಿ ಪರಿಣಮಿಸಿದೆ ಎಂದು ಹೆಸರು ಹೇಳಲಿಚ್ಛಿಸದ ಎಂಜಿನಿಯರ್ ಹೇಳುತ್ತಾರೆ.

‘ಏತ ನೀರಾವರಿ ಹೊರಗುತ್ತಿಗೆ ನೌಕರರ ನೇಮಕಾತಿ, ಜಾಕ್‌ವೆಲ್‍ ಸ್ವಚ್ಛತೆ, ವಿದ್ಯುತ್‍ ಪರಿವರ್ತಕ ಸಮಸ್ಯೆ, ಜಾಕ್‌ವೆಲ್‍ ಒಳಗಡೆ ದುರ್ವಾಸನೆ, ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆ, ಕೊಚ್ಚಿ ಹೋದ ನಾಲೆಗಳು, ಪೈಪ್‍ಲೈನ್‍ ಸೋರಿಕೆ ಕುರಿತು ಗಮನ ಸೆಳೆದರು ಸಹ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಗ್ಯಾನಪ್ಪ ಕಟ್ಟಿಮನಿ ಆರೋಪಿಸಿದ್ದಾರೆ.

ಏತ ನೀರಾವರಿ ಯೋಜನೆ ನಿರ್ವಹಣೆ ವಿಭಾಗದ ಕಿರಿಯ ಎಂಜಿನಿಯರ್ ಮಂಜುನಾಥ ಗುತ್ತೇದಾರ ಅವರನ್ನು ಸಂಪರ್ಕಿಸಿದಾಗ, ‘ನಿರ್ವಹಣೆ ಮತ್ತು ಮೇಲುಸ್ತುವಾರಿ, ದುರಸ್ತಿಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಮಂಜೂರಾತಿ ಬಂದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ರೇಸಿಂಗ್‍ ಪೈಪ್‍ಲೈನ್‍ ಸೋರಿಕೆ ಕಾಣಿಸಿಕೊಂಡಿದ್ದು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.