ADVERTISEMENT

ಕಲಮಂಗಿ: ಅಂಗನವಾಡಿಯಲ್ಲಿ ಮೂಲಸೌಕರ್ಯ ಕೊರತೆ

ನಿರ್ಲಕ್ಷ್ಯ ವಹಿಸಿದರೆ ಪಂಚಾಯಿತಿ ಕಚೇರಿ ಮುಂದೆ ಧರಣಿ: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 11:42 IST
Last Updated 27 ನವೆಂಬರ್ 2021, 11:42 IST

ಸಿಂಧನೂರು: ತಾಲ್ಲೂಕಿನ ಕಲಮಂಗಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ 1 ಮತ್ತು 2 ಅನೇಕ ಮೂಲಸೌಕರ್ಯಗಳಿಂದ ವಂಚಿತವಾಗಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಪರಿಶಿಷ್ಟ ಜಾತಿ ವಾರ್ಡ್‍ನಲ್ಲಿರುವ ಅಂಗನವಾಡಿ ಕೇಂದ್ರ-2 ರಲ್ಲಿ ಗ್ಯಾಸ್ ಸಿಲಿಂಡರ್ ಕಟ್ಟೆ ಇಲ್ಲದೆ ನೆಲದ ಮೇಲೆ ಅಡುಗೆ ಮಾಡಲಾಗುತ್ತಿದೆ. ಸುತ್ತಲೂ ಕಾಂಪೌಂಡ್ ಇಲ್ಲದ ಕಾರಣ ಸಾರ್ವಜನಿಕರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಅಸ್ವಚ್ಛತೆಗೊಳಿಸುತ್ತಿದ್ದಾರೆ. ಶೌಚಾಲಯಕ್ಕೆ ತೆಗೆದ ಗುಂಡಿಗೆ ರಿಂಗ್ ಹಾಕಿ ಮುಚ್ಚದೆ ಹಾಗೆಯೇ ಬಿಟ್ಟಿದ್ದು, ಅನಾಹುತಕ್ಕಾಗಿ ಕಾದು ಕುಳಿತಂತೆ ಕಾಣುತ್ತಿದೆ. ಆತಂಕದಲ್ಲಿ ಮಕ್ಕಳು ಮತ್ತು ಪಾಲಕರಿದ್ದಾರೆ ಎಂದು ಗ್ರಾಮದ ಆರ್.ಎಚ್.ಕಲಮಂಗಿ ದೂರಿದ್ದಾರೆ.

ಎರಡು ಅಂಗನವಾಡಿ ಕಟ್ಟಡಗಳು ಹಳೆದಾಗಿದ್ದು, ಬಿರುಕು ಬಿಟ್ಟಿವೆ. ಮಳೆ ಬಂದರೆ ಚಾವಣಿ ಸೋರುತ್ತಿದೆ. ಹೀಗಾಗಿ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸುವಂತೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಮೇಲ್ವಿಚಾರಕಿ ಜಯಶ್ರಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ ಮತ್ತು ಶಿವಮ್ಮ ಅವರು ಸಿಡಿಪಿಓ ಮೂಲಕ ಪಂಚಾಯಿತಿಗೆ ನಾಲ್ಕು ಬಾರಿ ನೋಟಿಸ್ ಜಾರಿ ಮಾಡಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

ADVERTISEMENT

ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಷಡಕ್ಷರಯ್ಯ ಹಿಂದೆ ಸ್ಮಾರ್ಟ್ ಕ್ಲಾಸ್ ನಿರ್ಮಿಸಬೇಕು ಎಂದು ಹೇಳಿದ್ದರು, ಈಗ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳುತ್ತಿರುವುದು ಹಣ ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮದ ದುರುಗಪ್ಪ, ಯಲ್ಲಪ್ಪ, ಶೇಖಪ್ಪ, ಲಕ್ಷ್ಮಿ, ಶರಣಮ್ಮ, ರಮೇಶ, ವೀರೇಶ, ಬಸವರಾಜ, ಹುಲುಗಪ್ಪ ಆರೋಪಿಸಿದ್ದಾರೆ.

ಮಕ್ಕಳ ಭವಿಷ್ಯ ನಿರ್ಮಿಸುವ ಅಂಗನವಾಡಿ ಕೇಂದ್ರಗಳನ್ನು ಆಧುನೀಕರಣಗೊಳಿಸಲು ಗ್ರಾಮ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಮುಂದಾಗುವ ಅನಾಹುತಗಳಿಗೆ ನೇರ ಹೊಣೆಯಾಗಬೇಕಾಗುತ್ತದೆ. ಜತೆಗೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.